ಇನ್ಮುಂದೆ ಈ ಕಾರಣಕ್ಕೆ ಸಿಗ್ನಲ್ ಜಂಪ್ ಮಾಡಿದರೆ ನಿಮಗೆ ದಂಡವಿರಲ್ಲ

Krishnaveni K

ಮಂಗಳವಾರ, 16 ಜುಲೈ 2024 (11:08 IST)
ಬೆಂಗಳೂರು: ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಸಿಗ್ನಲ್ ಜಂಪ್ ಮಾಡಿದರೂ ದಂಡ ಪಾವತಿಸಬೇಕಾದ ಸ್ಥಿತಿ ಇದುವರೆಗಿತ್ತು. ಆದರೆ ಇನ್ನು ಮುಂದೆ ಈ ಒಂದು ಸಂದರ್ಭದಲ್ಲಿ ಸಿಗ್ನಲ್ ಜಂಪ್ ಮಾಡಿದರೆ ದಂಡ ಬೇಡ ಎಂದು ಬೆಂಗಳೂರು ಸಂಚಾರಿ ಪೊಲೀಸರು ವಿನಾಯ್ತಿ ನೀಡಿದ್ದಾರೆ. ಅದು ಯಾವುದು ನೋಡಿ.

ಕೆಲವೊಮ್ಮೆ ಸಿಗ್ನಲ್ ಬಳಿ ನಿಂತಿದ್ದಾಗ ಹಿಂದಿನಿಂದ ಆಂಬ್ಯುಲೆನ್ಸ್ ಬಂದಾಗ ಅದಕ್ಕೆ ದಾರಿ ಮಾಡಿಕೊಡಲು ಸಿಗ್ನಲ್ ತೆರವಾಗದಿದ್ದರೂ ಮುಂದೆ ನಡೆಯಬೇಕಾಗುತ್ತದೆ. ಆದರೆ ಹೀಗೆ ಮಾಡಿದಾಗ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಿದ್ದರು. ಒಬ್ಬರಿಗೆ ಸಹಾಯ ಮಾಡಲು ಹೋಗಿ ಈ ರೀತಿ ದಂಡ ತೆರುವ ಪರಿಸ್ಥಿತಿ ಇದುವರೆಗೆ ಇತ್ತು.

ಆದರೆ ಇನ್ನು ಮುಂದೆ ಈ ರೀತಿ ಆಗಲ್ಲ. ಸಿಗ್ನಲ್ ಬಳಿ ನಿಂತಿದ್ದಾಗ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವ ಉದ್ದೇಶದಿಂದ ಸಿಗ್ನಲ್ ಜಂಪ್ ಮಾಡಿದರೆ ಇನ್ನು ಮುಂದೆ ದಂಡ ತೆರಬೇಕಾಗಿಲ್ಲ ಎಂಬ ಹೊಸ ನಿಯಮವನ್ನು ಟ್ರಾಫಿಕ್ ಪೊಲೀಸರು ಜಾರಿಗೆ ತಂದಿದ್ದಾರೆ. ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಅನುಚೇತನ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಅನೇಕ ದೂರುಗಳು ದಾಖಲಾಗಿದ್ದವು. ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದ್ದಕ್ಕೆ ದಂಡ ಪಾವತಿಸಿದ ಅನೇಕ ಘಟನೆಗಳಾಗಿದ್ದವು. ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶವೂ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಸಂಚಾರಿ ಪೊಲೀಸ್ ವಿಭಾಗ ಇಂತಹದ್ದೊಂದು ಹೊಸ ನಿಯಮ ಜಾರಿಗೆ ತಂದಿದೆ. ಪ್ರತಿ ಸಿಗ್ನಲ್ ನಲ್ಲಿ ಕ್ಯಾಮರಾಗಳಿದ್ದು, ಸವಾರ ಯಾವ ಕಾರಣಕ್ಕೆ ಸಿಗ್ನಲ್ ಜಂಪ್ ಮಾಡಿದ್ದಾನೆ ಎಂಬುದು ದಾಖಲಾಗುತ್ತದೆ. ಈ ಕಾರಣಕ್ಕೆ ಸಿಗ್ನಲ್ ಜಂಪ್ ಆಗಿದ್ದರೆ ವಾಹನ ಸವಾರನ ಮೇಲಿನ ದಂಡ ರದ್ದು ಮಾಡಲಾಗುತ್ತದೆ. 10 ಜಂಕ್ಷನ್ ಗಳಲ್ಲಿ ನಿತ್ಯ ಓಡಾಡುವ ಸುಮಾರು 80 ಆಂಬ್ಯುಲೆನ್ಸ್ ಗಳಲ್ಲಿ ಜಿಪಿಎಸ್ ಗಳನ್ನು ಅಳವಡಿಸಲಾಗಿದೆ.  ಇದರಿಂದ ಸಿಗ್ನಲ್ ಗಳಲ್ಲಿ ಈ ಆಂಬ್ಯುಲೆನ್ಸ್ ಗಳಲ್ಲಿ ಬಂದರೆ ಸ್ವಯಂ ಚಾಲಿತವಾಗಿ ಹಸಿರು ದೀಪ ಬೆಳಗುವಂತೆ ಮಾಡಲು 10 ಟ್ರಾಫಿಕ್ ಸಿಗ್ನಲ್ ಜಂಕ್ಷನ್ ಗಳಲ್ಲಿ ಜಿಯೋ ಫೆನ್ಸಿಂಗ್ ಅಳವಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ