ಇದೇ 28, 29 ರಂದು ಮತ್ತೆ ಮೋದಿ ರಾಜ್ಯಕ್ಕೆ ದೌಡು: ಉತ್ತರ ಕರ್ನಾಟಕದಲ್ಲಿ ಮತಬೇಟೆಗೆ ಸಿದ್ಧತೆ

Sampriya

ಮಂಗಳವಾರ, 23 ಏಪ್ರಿಲ್ 2024 (15:25 IST)
Photo Courtesy X
ಬೆಂಗಳೂರು: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಈ ವಾರಾಂತ್ಯದಲ್ಲಿ ಉತ್ತರ ಕರ್ನಾಟಕಕ್ಕೂ ಆಗಮಿಸಲಿದ್ದಾರೆ.

ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಏಪ್ರಿಲ್ 28 ಹಾಗೂ 29 ರಂದು ಆರು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತಬೇಟೆ ಮಾಡಲಿದ್ದಾರೆ. 12 ಕ್ಷೇತ್ರಗಳ ಟಾರ್ಗೆಟ್ ಮಾಡಿ ಎರಡು ದಿನ ಆರು ಕಡೆ ಬೃಹತ್ ಸಮಾವೇಶ ನಡೆಸಲಿದ್ದಾರೆ.

28 ರಂದು ದಾವಣಗೆರೆ, ಕಾರವಾರ, ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಅಂದು ಪ್ರಧಾನಿ ಮೋದಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಎಪ್ರಿಲ್ 29 ರಂದು ವಿಜಯಪುರ, ಕೊಪ್ಪಳ ಹಾಗೂ ಕಲಬುರಗಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇದನ್ನು ಹೀಗೆ ಮುಂದುವರೆಸಲು ಉತ್ತರ ಕರ್ನಾಟಕ ಭಾಗಕ್ಕೆ ನರೇಂದ್ರ ಮೋದಿ ಬರಲಿದ್ದಾರೆ. ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿ ಬಿಜೆಪಿಯನ್ನು ಇನ್ನಷ್ಟು ಸುಭದ್ರಗೊಳಿಸಲು ಪ್ರಧಾನಿ ಮೋದಿ ದೌಡಾಯಿಸಲಿದ್ದಾರೆ.

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್​ 26 ರಂದು ನಡೆಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ