ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ 7 ಸಿಬ್ಬಂದಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ.
ಜೈಲರ್, ಅಸಿಸ್ಟೆಂಟ್ ಜೈಲರ್, ವಾರ್ಡನ್ ಹುದ್ದೆಯಲ್ಲಿದ್ದ ಸಂಪತ್ ಕುಮಾರ್, ಶರಣ ಬಸಪ್ಪ, ಪ್ರಭು, ತಿಪ್ಪೇಸ್ವಾಮಿ, ಶ್ರೀಕಾಂತ್ ಸೇರಿದಂತೆ ಏಳು ಮಂದಿ ಅಧಿಕಾರಿಗಳನ್ನು ಈಗ ಸಸ್ಪೆಂಡ್ ಮಾಡಲಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ಮೇಲೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈಗ ತನಿಖೆಗೆ ಆದೇಶಿಸಲಾಗಿದೆ. ಪದೇ ಪದೇ ರೀತಿ ಈ ರೀತಿ ಆಗಬಾರದು ಎಂಬ ದೃಷ್ಟಿಯಿಂದ ಹಿರಿಯ ಅಧಿಕಾರಿಗಳನ್ನೂ ಅಲ್ಲಿಂದ ವರ್ಗಾವಣೆ ಮಾಡಲಾಗಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಇಂತಹ ಪ್ರಕರಣಗಳು ನಡೆಯಬಾರದು. ಜ್ಯಾಮರ್ ವ್ಯವಸ್ಥೆಯಿದ್ದರೂ ಈ ರೀತಿ ಆಗುತ್ತಿದೆ ಎಂದರೆ ಅದೊಂದು ಸೂಕ್ಷ್ಮವಾದ ವಿಚಾರವಾಗಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ವಿಲ್ಸನ್ ಗಾರ್ಡನ್ ಮತ್ತಿತರರೊಂದಿಗೆ ಜೈಲಿನ ಲಾನ್ ನಲ್ಲಿ ಕುರ್ಚಿ ಹಾಕಿ ಕೂತುಕೊಂಡು ಕೈಯಲ್ಲಿ ಕಾಫಿ ಕಪ್, ಸಿಗರೇಟು ಸೇದುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಗೃಹಸಚಿವರು ಕ್ರಮ ಕೈಗೊಂಡಿದ್ದಾರೆ.