ಖಾಸಗಿ ಶಾಲೆಗಳ ಫೀಸ್ ನೋಡಿ ಪೋಷಕರು ಕಂಗಾಲು

Krishnaveni K

ಶನಿವಾರ, 23 ಮಾರ್ಚ್ 2024 (14:44 IST)
ಬೆಂಗಳೂರು: ಇನ್ನೇನು ಈ ಶೈಕ್ಷಣಿಕ ವರ್ಷ ಮುಗಿಯುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಖಾಸಗಿ ಶಾಲೆಗಳು ಈಗಾಗಲೇ ಪೋಷಕರಿಗೆ ಫೀಸ್ ವಿವರ ನೀಡಿದೆ. ಆದರೆ ಫೀಸ್ ಲಿಸ್ಟ್ ನೋಡಿದ ಪೋಷಕರು ಕಂಗಾಲಾಗಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಫೀಸ್ ಹೆಚ್ಚಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ನೀಡಿದ್ದರಿಂದ ಬಹುತೇಕ ಶಾಲೆಗಳು ಶುಲ್ಕ ಹೆಚ್ಚಿಸಿರಲಿಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ಅಂತಹ ನಿರ್ಬಂಧವಿಲ್ಲ. ಹೀಗಾಗಿ ಕೊರೋನಾ ಸಂದರ್ಭದಲ್ಲಿ ನಷ್ಟವಾದ ಫೀಸ್ ನ್ನು ಈಗ ಬಡ್ಡಿ ಸಮೇತ ವಸೂಗಿಳಿದಂತೆ ಕಾಣುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಖಾಸಗಿ ಶಾಲೆಗಳ ಶುಲ್ಕ ಶೇ.30 ರಷ್ಟು ಏರಿಕೆಯಾಗಿದೆ. ಉದಾಹರಣೆಗೆ 50,000 ರೂ.ಗಳಿದ್ದ ಫೀಸ್ ಈಗ 65 ರಿಂದ 70 ಸಾವಿರ ರೂ.ವರೆಗೆ ಬಂದು ನಿಂತಿದೆ. ಇದಲ್ಲದೆ, ಬುಕ್ಸ್, ಯೂನಿಫಾರ್ಮ್ ಎಂದು ಹೆಚ್ಚುವರಿ ಫೀಸ್ ಕೇಳಲಾಗುತ್ತಿದೆ.

ಇದೇ ರೀತಿ ಮುಂದುವರಿದರೆ ಮಧ್ಯಮ ವರ್ಗದ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಷ್ಟವಾಗಲಿದೆ. ‘ಇದು ಯಾಕೆ ಹೀಗೆ ಎಂದು ಪೋಷಕರು ನೇರವಾಗಿ ಶಾಲೆಗಳನ್ನು ಕೇಳಿದರೆ ಕೊರೋನಾ ಸಂದರ್ಭದಲ್ಲಿ ನಾವು ರಿಯಾಯಿತಿ ನೀಡಿದ್ದೆವಲ್ಲ. ಈಗ ನಮಗೂ ಅನಿವಾರ್ಯ. ಹೀಗಾಗಿ ಹೆಚ್ಚಿಸಿದ್ದೇವೆ ಎನ್ನುತ್ತಿದ್ದಾರೆ’ ಎಂದು ಪೋಷಕರೊಬ್ಬರು ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಹೆಚ್ಚಿನ ಶಾಲೆಗಳಲ್ಲಿ ಜೂನ್ ತಿಂಗಳಿಗೆ ಮೊದಲ ಹಂತದ ಫೀಸ್ ಕಟ್ಟಲು ಗಡುವು ನೀಡಲಾಗುತ್ತದೆ. ಆದರೆ ಮೊದಲ ಹಂತದ ಶುಲ್ಕವೇ 40 ಸಾವಿರದ ಗಡಿ ದಾಟುತ್ತಿದೆ. ಅಂದರೆ ಒಮ್ಮೆಗೇ ಎರಡೇ ತಿಂಗಳಲ್ಲಿ ದುಬಾರಿ ಫೀಸ್ ಕಟ್ಟುವ ಅನಿವಾರ್ಯತೆ ಪೋಷಕರದ್ದಾಗಿದೆ. ಒಮ್ಮೆಗೇ ಇಷ್ಟೊಂದು ಫೀಸ್ ಕಟ್ಟದೇ ಇದ್ದರೆ ಪರೀಕ್ಷೆಗೆ ಅನುವು ಮಾಡಿಕೊಡುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿಗಳು ಎಚ್ಚರಿಕೆ ನೀಡುತ್ತಿವೆ. ಹೀಗಾಗಿ ಈ ಬಾರಿ ಖಾಸಗಿ ಶಾಲೆಗಳ ಶುಲ್ಕ ಪೋಷಕರ ಪಾಲಿಗೆ ಬಿಸಿ ತುಪ್ಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ