ವಕ್ಫ್ ವಿವಾದಕ್ಕೆ ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರ ಎಂಟ್ರಿ

Krishnaveni K

ಮಂಗಳವಾರ, 5 ನವೆಂಬರ್ 2024 (18:13 IST)
ಬೆಂಗಳೂರು: ರಾಜ್ಯದಲ್ಲಿ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ವಿವಾದಕ್ಕೆ ಈಗ ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರ ಎಂಟ್ರಿಯಾಗಲಿದೆ. ಈಗಾಗಲೇ  ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದರು. ಇದೀಗ ಪಕ್ಕಾ ಆಗಿದೆ.

ವಕ್ಫ್ ಆಸ್ತಿ ಎಂದು ರಾಜ್ಯದ ಹಲವು ಜಿಲ್ಲೆಗಳ ರೈತರಿಗೆ ನೋಟಿಸ್ ನೀಡಲಾಗಿದೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಹಲವು ರೈತರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರೈತರ ಜಮೀನುಗಳು, ಕೆಲವು ಮಠ, ಮಂದಿರಗಳು, ಐತಿಹಾಸಿಕ ಸ್ಥಳಗಳನ್ನೂ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿರುವುದು ಬೆಳಿಗೆ ಬಂದ ಬೆನ್ನಲ್ಲೇ ಈಗ ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ನವಂಬರ್ 7 ರಂದು ಕರ್ನಾಟಕಕ್ಕೆ ಆಗಮಿಸಲಿರುವ ಜಗದಾಂಬಿಕಾ ಪಾಲ್ ರೈತರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ವಕ್ಫ್ ಮಸೂದೆ ತಿದ್ದುಪಡಿ ಸಂಬಂಧ ಕೇಂದ್ರ ಸರ್ಕಾರ ಪರಾಮರ್ಶೆ ನಡೆಸಲು ಸಂಸದೀಯ ಸಮಿತಿ ರಚಿಸಿತ್ತು. ಇದೀಗ ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದಿರುವಾಗ ಜಗದಾಂಬಿಕಾ ಪಾಲ್ ಆಗಮಿಸುತ್ತಿರುವುದು ಮಹತ್ವ ಪಡೆದಿದೆ.

ಈ ಮೊದಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಜಗದಾಂಬಿಕಾ ಪಾಲ್ ಗೆ ರಾಜ್ಯಕ್ಕೆ ಬರಲು ಮನವಿ ಮಾಡಿ ಪತ್ರ ಬರೆದಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ರೈತರು ಅಹವಾಲುಗಳನ್ನು ನೀಡುವುದರ ಜೊತೆಗೆ ತಮ್ಮ ಸಮಸ್ಯೆಗಳನ್ನು ಜಗದಾಂಬಿಕಾ ಪಾಲ್ ಬಳಿ ವಿವರಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ