ಹುಬ್ಬಳ್ಳಿ: ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ರನ್ನು ಕಾಶ್ಮೀರಕ್ಕೆ ತೆರಳಲು ಸೂಚನೆ ನೀಡಿದರು. ಆದರೆ ಕಾಶ್ಮೀರಕ್ಕೆ ತೆರಳಲು ಹೊರಟ ಸಚಿವ ಸಂತೋಷ್ ಲಾಡ್ ಪರದಾಡಿದ ಘಟನೆ ನಡೆದಿದೆ.
ನಿನ್ನೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 27 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಪ್ರವಾಸಿಗರು ಇಲ್ಲಿ ಸಿಲುಕಿಕೊಂಡಿದ್ದಾರೆ. ಕನ್ನಡಿಗರ ರಕ್ಷಣೆಗಾಗಿ ಸಿಎಂ ಸಿದ್ದರಾಮಯ್ಯ 2 ವಿಶೇಷ ಅಧಿಕಾರಿಗಳ ತಂಡ ಮತ್ತು ಸಚಿವ ಸಂತೋಷ್ ಲಾಡ್ ರನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಸಂತೋಷ್ ಲಾಡ್ ದೆಹಲಿಗೆ ತೆರಳಬೇಕಿತ್ತು. ಇದಕ್ಕಾಗಿ ಅವರಿಗೆ ವಿಶೇಷ ವಿಮಾನವೂ ಸಿದ್ಧವಾಯ್ತು. ಆದರೆ ಪೈಲಟ್ ಮಾತ್ರ ಸಿಗಲಿಲ್ಲ. ಇದರಿಂದಾಗಿ ಅವರು ಮಧ್ಯರಾತ್ರಿಯವರೆಗೂ ಹುಬ್ಬಳ್ಳಿಯಲ್ಲೇ ಪರದಾಡುವಂತಾಯಿತು.
ಪೈಲಟ್ ಅರೇಂಜ್ ಆದ ಬಳಿಕ ಹುಬ್ಬಳ್ಳಿಯಿಂದ ದೆಹಲಿಗೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೀಗ ಕಾಶ್ಮೀರಕ್ಕೆ ಬಂದಿಳಿದಿರುವವ ಸಂತೋಷ್ ಲಾಡ್ ಸ್ಥಳೀಯ ಅಧಿಕಾರಿಗಳ ನೆರವಿನೊಂದಿಗೆ ಕನ್ನಡಿಗರ ರಕ್ಷಣಾ ಕಾರ್ಯ ಮಾಡುತ್ತಿದ್ದಾರೆ.