Pehalgam terror attack: ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗುತ್ತಾ

Krishnaveni K

ಬುಧವಾರ, 23 ಏಪ್ರಿಲ್ 2025 (08:18 IST)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಿನ್ನೆ ಉಗ್ರರು ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದಿದ್ದು ಹಲವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಘಟನೆ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ಉಗ್ರರನ್ನು ಸುಮ್ನೇ ಬಿಡಲ್ಲ ಎಂದಿದ್ದಾರೆ. ಇದರ ನಡುವೆಯೇ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗುತ್ತಾ ಎಂಬ ಅನುಮಾನ ಮೂಡಿದೆ.

ಜಮ್ಮು ಕಾಶ್ಮೀರದಲ್ಲಿ ಇದೀಗ ತಾನೇ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿತ್ತು. ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದರು. ಇದರ ಬೆನ್ನಲ್ಲೇ ಉಗ್ರರು ನಡೆಸಿದ ಈ ದಾಳಿ ಪ್ರವಾಸಿಗರ ಮನದಲ್ಲಿ ಭೀತಿ ಸೃಷ್ಟಿಸಿದೆ.

ಮಡಿದವರಲ್ಲಿ ಕೆಲವರು ಆಗಷ್ಟೇ ಮದುವೆ ಮುಗಿಸಿ ಹನಿಮೂನ್ ಗೆ ಬಂದವರೂ ಇದ್ದರು. ಕುಟುಂಬ ಸಮೇತ ಹೋಗಿದ್ದಾಗ ಇಂತಹದ್ದೊಂದು ದುರ್ಘಟನೆಯಾಗಿದ್ದು ಕನಸೋ ಎಂಬಂತೆ ಭಾಸವಾಗುತ್ತಿದೆ. ತಮ್ಮವರು ತಮ್ಮ ಕಣ್ಣೆದುರೇ ಪ್ರಾಣ ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲೂ ಅವರಿಗೆ ಆಗುತ್ತಿಲ್ಲ.

ಇದರ ನಡುವೆ ಉಗ್ರರ ದಾಳಿಗೆ ಪ್ರತೀಕಾರ ತೀರಿಸದೇ ಬಿಡಲ್ಲ ಎಂದು ಮೋದಿ ಗುಡುಗಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಮೋದಿ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದರು. ಈ ಹಿಂದೆ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ಮಾಡಿದಾಗ ಭಾರತ ಒಮ್ಮೆ ಸರ್ಜಿಕಲ್ ಸ್ಟ್ರೈಕ್ ಇನ್ನೊಮ್ಮೆ ಏರ್ ಸ್ಟ್ರೈಕ್ ಮಾಡಿ ಉಗ್ರರನ್ನು ಸದೆಬಡಿದಿತ್ತು. ಇದಾದ ಬಳಿಕ ಉಗ್ರ ದಾಳಿಗಳು ತಕ್ಕಮಟ್ಟಿಗೆ ತಣ್ಣಗಾಗಿದ್ದವು. ಆದರೆ ಈಗ ಮತ್ತೆ ಅಮಾಯಕ ಪ್ರಾಣ ತೆಗೆದ ಉಗ್ರರ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ