BJPಯ ಬಡವರ ಪರ, ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಅನ್ನೋದು ಫಲಿತಾಂಶದಿಂದ ಸಾಬೀತು: ಮೋದಿ
ಶನಿವಾರ, 12 ಮಾರ್ಚ್ 2022 (20:43 IST)
ಬಿಜೆಪಿಯ ಬಡವರ ಪರ ಮತ್ತು ಸಕ್ರಿಯ ಆಡಳಿತಕ್ಕೆ ಜನರ ಬೆಂಬಲ ಎಂಬುದನ್ನು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ನಗರದ ಬಿಜೆಪಿ ಹೆಡ್ ಕ್ವಾಟ್ರಸ್‌ನಲ್ಲಿ ಮಾತನಾಡಿದ ಅವರು, ಮಾ.10ರಿಂದ ಹೋಳಿ ಆರಂಭವಾಗಲಿದೆ ಎಂದು ನಾವು ಮೊದಲೇ ಹೇಳಿದ್ದೆವು. ಇದು ನಮ್ಮ ಎನ್‌ಡಿಎ ಕಾರ್ಯಕರ್ತರ ʼವಿಜಯ 4′. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ, ಬಿಜೆಪಿಗೆ ವಿಜಯವನ್ನು ಖಚಿತಪಡಿಸಿದ್ದಕ್ಕಾಗಿ ನಾನು ಎಲ್ಲಾ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದೇ ಮೊದಲ ಬಾರಿಗೆ ಎರಡನೇ ಅವಧಿಗೆ ಸಿಎಂ ಆಯ್ಕೆಯಾಗಿದ್ದಾರೆ (ಯೋಗಿ ಆದಿತ್ಯನಾಥ್) ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಈ ಚುನಾವಣೆಗಳಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರು ನಮಗೆ ಆಶೀರ್ವಾದ ಮಾಡಿದ್ದಾರೆ. ಮಹಿಳಾ ಮತದಾರರು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ನಾವು ಅದ್ಭುತವಾಗಿ ಗೆದ್ದಿದ್ದೇವೆ. ಈ ವಿಜಯದಲ್ಲಿ ನಮ್ಮ ನಾರಿ ಶಕ್ತಿ ನಮ್ಮ ಪಾಲುದಾರರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.
ಗೋವಾದಲ್ಲಿ ಎಲ್ಲಾ ಎಕ್ಸಿಟ್ ಪೋಲ್‌ಗಳು ತಪ್ಪು ಎಂಬುದು ಸಾಬೀತಾಗಿದೆ. ಉತ್ತರಾಖಂಡದಲ್ಲಿ ಬಿಜೆಪಿ ಹೊಸ ಇತಿಹಾಸ ಬರೆದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪಕ್ಷವೊಂದು ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ ಎಂದು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಕುರಿತು ಪ್ರಧಾಣಿ ಪ್ರತಿಕ್ರಿಯಿಸಿದ್ದಾರೆ.
ನಾವು 2019ರಲ್ಲಿ (ಕೇಂದ್ರ) ಸರ್ಕಾರವನ್ನು ರಚಿಸಿದಾಗ, 2017ರ (ಯುಪಿ ಗೆಲುವು) ಗೆಲುವಿನಿಂದಾಗಿ ಎಂದು ತಜ್ಞರು ಹೇಳಿದ್ದರು. 2022ರ ಯುಪಿ ಚುನಾವಣಾ ಫಲಿತಾಂಶವೂ 2024ರ ಸಾರ್ವತ್ರಿಕ ಚುನಾವಣೆ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅದೇ ತಜ್ಞರು ಹೇಳುತ್ತಾರೆಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಇಂದು ನಾನು ನನ್ನ ಕೆಲವು ಕಾಳಜಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸಾಮಾನ್ಯ ಜನರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವರು ರಾಜಕೀಯದ ಗುಣಮಟ್ಟವನ್ನು ಕುಂಠಿತಗೊಳಿಸುತ್ತಿದ್ದಾರೆ. ನಮ್ಮ ಲಸಿಕಾ ಕಾರ್ಯಕ್ರಮವನ್ನು ಜಗತ್ತು ಹೊಗಳಿತು. ಆದರೆ ಕೆಲವರು ನಮ್ಮ ಲಸಿಕೆಗಳನ್ನೇ ಪ್ರಶ್ನಿಸಿದರು ಎಂದು ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಪಂಜಾಬ್‌ನಲ್ಲಿ ಬಿಜೆಪಿ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ನಾನು ಈಗಾಗಲೇ ನೋಡುತ್ತಿದ್ದೇನೆ. ನಮ್ಮ ಪಂಜಾಬ್ ಕಾರ್ಯಕರ್ತರು ಕಷ್ಟದ ಸಂದರ್ಭಗಳ ನಡುವೆಯೂ ಪಂಜಾಬ್‌ನಲ್ಲಿ ತಮ್ಮ ಕೆಲಸದಿಂದ ಪಕ್ಷ ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ಭಾರತೀಯ ಪ್ರಜೆಗಳು ಉಕ್ರೇನ್‌ನಲ್ಲಿ ಸಿಲುಕಿರುವಾಗಲೂ ದೇಶದ ನೈತಿಕ ಸ್ಥೈರ್ಯವನ್ನು ಮುರಿಯುವ ಮಾತುಗಳು ನಡೆದಿರುವುದು ದುರದೃಷ್ಟಕರ. ಈ ಜನರು ಸಹ ʼಆಪರೇಷನ್ ಗಂಗಾʼ ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ಇದು ಭಾರತದ ಭವಿಷ್ಯಕ್ಕೆ ದೊಡ್ಡ ಆತಂಕವಾಗಿದೆ ಎಂದು ಎಚ್ಚರಿಸಿದ್ದಾರೆ.
ಯುದ್ಧದಲ್ಲಿ ಹೋರಾಡುತ್ತಿರುವ ರಾಷ್ಟ್ರಗಳೊಂದಿಗೆ (ರಷ್ಯಾ-ಉಕ್ರೇನ್) ಭಾರತವು ಆರ್ಥಿಕ, ರಕ್ಷಣೆ, ಭದ್ರತೆ, ರಾಜಕೀಯ ಸಂಬಂಧಗಳನ್ನು ಹೊಂದಿದೆ. ನಾವು ಸೂರ್ಯಕಾಂತಿ ಎಣ್ಣೆಯಂತಹದ್ದನ್ನೇ ಆಮದು ಮಾಡಿಕೊಳ್ಳುತ್ತೇವೆ. ಕಲ್ಲಿದ್ದಲು, ಅನಿಲ, ಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆಗಳು ಪ್ರಪಂಚದಾದ್ಯಂತ ವೇಗವಾಗಿ ಏರುತ್ತಿವೆ ಎಂದು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಮತದಾರರು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವನ್ನು ಖಚಿತಪಡಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.