ಮಹಿಳೆಯ ಬ್ಯಾಗ್, ಎಟಿಎಂ ಕಳ್ಳತನಕ್ಕೆ ಯತ್ನ ಪ್ರಕರಣ: ಆರೋಪಿ ಬಂಧನ
ಮಂಗಳವಾರ, 18 ಸೆಪ್ಟಂಬರ್ 2018 (15:06 IST)
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ನಿಡ್ಡೇಲ್ ಮೈದಾ ಫಾಕ್ಟರಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಬ್ಯಾಗ್ ನ್ನು ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ವಾಮಂಜೂರು ಮಸೀದಿ ಕಂಪೌಡು ನಿವಾಸಿ ಆರೀಫ್ (24) ಬಂಧಿತ ಆರೋಪಿ. ಬಂಧಿತನಿಂದ ನಂಬರ್ ಇಲ್ಲದ ಹೋಂಡಾ ಆಕ್ಟಿವಾ, ಕೃತ್ಯ ನಡೆಸಲು ಉಪಯೋಗಿಸಿದ ಎರಡು ಹೆಲ್ಮೆಟ್, ಸುಲಿಗೆ ಮಾಡಿದ ಬ್ಯಾಗ್ ಗಳಲ್ಲಿದ್ದ ಎಂಟು ವಿವಿಧ ಕಂಪೆನಿಗಳ ಮೊಬೈಲ್ ಫೋನ್ ಹಾಗೂ ಎ.ಟಿ.ಎಂ. ಕಳವು ಯತ್ನಕ್ಕೆ ಉಪಯೋಗಿಸಿದ ರಾಡ್ ನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈತನ ಜೊತೆಗೆ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಆರೀಫ್ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಕೊಲೆ ಯತ್ನ ಹಾಗೂ ದರೋಡೆಗೆ ಯತ್ನದಂತಹ 3 ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ ಪೊಲೀಸ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 06 ಮಹಿಳೆಯರ ಬ್ಯಾಗ್ ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಆರೋಪಿ ಆರೀಫ್ ಪಾಣೆ ಮಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಎ.ಟಿ.ಎಂ. ಕಳವು ಯತ್ನ ಪ್ರಕರಣದಲ್ಲಿ ಕೂಡ ಭಾಗಿಯಾಗಿರುತ್ತಾನೆ. ಈತ ಈಗಾಗಲೇ ದಸ್ತಗಿರಿಯಾದ ಅಜರುದ್ದೀನ್ ಎಂಬಾತನೊಂದಿಗೆ ಲಾರಿ ಬ್ಯಾಟರಿ ಕಳವು ಹಾಗೂ ಕಾಂಕ್ರೀಟ್ ಕಬ್ಬಿಣದ ಶೀಟ್ ಕಳವು ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.