ಪೆಟ್ರೋಲ್ ಟ್ಯಾಂಕರ್ ಪಲ್ಟಿ: ಗ್ರಾಮಸ್ಥರ ಮುಂಜಾಗೃತೆಯಿಂದ ತಪ್ಪಿದ ಅನಾಹುತ

ಬುಧವಾರ, 26 ಡಿಸೆಂಬರ್ 2018 (17:03 IST)
ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಗ್ರಾಮಸ್ಥರು ಭಯದಲ್ಲೇ ರಾತ್ರಿ ಕಳೆದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ತಡರಾತ್ರಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಎಸ್ ಆರ್ ಕಂಪನಿಗೆ ಸೇರಿದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಹಲ್ಯಾಳ ಗ್ರಾಮದಲ್ಲಿ ಪಲ್ಟಿಯಾಗಿದ್ದು ಟ್ಯಾಂಕರ್ ನಿಂದ ಪೆಟ್ರೋಲ್ ಹೊರಚೆಲ್ಲಿದ ಪರಿಣಾಮ ಬೆಂಕಿ ಅವಘಡ ಸಂಭವಿಸಿ ಟ್ಯಾಂಕರ್ ಸ್ಫೋಟಗೊಳ್ಳುವ ಅನಾಹುತ ಗ್ರಾಮಸ್ಥರ ಮುನ್ನೆಚ್ಚರಿಕೆ ಕ್ರಮದಿಂದ ತಪ್ಪಿದೆ. ಸ್ಥಳಕ್ಕೆ ದೌಡಾಯಿಸಿ ಬಂದ ಅಥಣಿಯ ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ನೇತೃತ್ವದಲ್ಲಿ ಸತತ ಐದು ಗಂಟೆ ಕಾರ್ಯಾಚರಣೆ ನಡೆಸುವ ಮೂಲಕ ಪಲ್ಟಿಯಾಗಿದ್ದ ಟ್ಯಾಂಕರ್ ಮೇಲಕ್ಕೆ ಎತ್ತಿ ಸಂಚಾರ ಸುಗಮಗೊಳಿಸಿದ್ದಾರೆ.
ಇನ್ನೂ ಹಲ್ಯಾಳ ಗ್ರಾಮದಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಗ್ರಾಮಸ್ಥರು ಡಂಗುರ ಸಾರುವ ಮೂಲಕ ಬೆಂಕಿ ಕಡ್ಡಿಗೀರದಂತೆ ಮನವಿ ಮಾಡಿದರು. ಜನರು ಬೆಳಗಿನ ಕಾರ್ಯಾಚರಣೆ ಮುಗಿಯುವವರೆಗೂ ಒಲೆ ಹೊತ್ತಿಸದೆ ಕಾಯುವ ಸ್ಥಿತಿ ಕೂಡ ನಿರ್ಮಾಣವಾಗಿತ್ತು.

ಈ ಮಧ್ಯೆ ಸಿಕ್ಕವರಿಗೆ ಸೀರುಂಡೆ ಅನ್ನುವ ಹಾಗೆ ಟ್ಯಾಂಕರ್ ನಿಂದ ಚೆಲ್ಲುತ್ತಿದ್ದ ಪೆಟ್ರೋಲ್ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದು ಕೊಡ, ಬಕೇಟು, ಕ್ಯಾನುಗಳಲ್ಲಿ ಪೆಟ್ರೋಲ್ ತೆಗೆದುಕೊಂಡು ಹೋಗುತ್ತಿದ್ದರು.

ಆದರೆ ಅಧಿಕಾರಿಗಳ ಚುರುಕು ಕಾರ್ಯಾಚರಣೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ