ಬಿಡಿಎ ಅಧ್ಯಕ್ಷ ವಿಶ್ವನಾಥ್ ನೇಮಕ ಪ್ರಶ್ನಿಸಿ ಪಿಐಎಲ್?

ಶುಕ್ರವಾರ, 22 ಅಕ್ಟೋಬರ್ 2021 (11:23 IST)
ಬೆಂಗಳೂರು :  ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಲು ಆದೇಶಿಸಿದೆ.

ಬಿಡಿಎ ಹಣಕಾಸು ಸದಸ್ಯ ಎಸ್.ಎಂ. ರಾಮ್ ಪ್ರಸಾದ್, ಎಂಜಿನಿಯರಿಂಗ್ ಸದಸ್ಯ ಎಚ್.ಆರ್. ಶಾಂತರಾಜಣ್ಣ, ನಗರ ಯೋಜನೆ ಉಸ್ತುವಾರಿ ಜೆ. ಸುಮಾ ಅವರ ನೇಮಕವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ನಗರದ ವಕೀಲ ಎ.ಎಸ್.ಹರೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಯನ್ನು ನ.30ಕ್ಕೆ ಮುಂದೂಡಿತು.
ಎಸ್.ಆರ್. ವಿಶ್ವನಾಥ್ ಅವರನ್ನು 2020ರ ನ.24ರಂದು ಬಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಸಂಬಂಧದ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿಲ್ಲ ಎಂದು ಅರ್ಜಿದಾರರು ದೂರಿದರು.
'ಬಿಡಿಎ ಅಧ್ಯಕ್ಷರಾಗಲು ವಿಶ್ವನಾಥ್ ಅನರ್ಹರು. ಶಾಸಕರಾಗಿ ಮಾಸಿಕ ವೇತನ ಮತ್ತು ಇತರ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಅವರು ಬಿಡಿಎ ಅಧ್ಯಕ್ಷರ ಸಂಭಾವನೆ ಮತ್ತು ಸವಲತ್ತುಗಳನ್ನೂ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿ ರಾಜ್ಯದ ಸಾರ್ವಜನಿಕ ನಿಧಿಯಿಂದ ಎರಡು ಸಂಬಳ ಪಡೆಯಲು ಸಾಧ್ಯವಿಲ್ಲ. ಹೀಗಾಗಿ, ಒಬ್ಬ ಅನರ್ಹ ವ್ಯಕ್ತಿಯನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ' ಎಂದು ಅರ್ಜಿದಾರರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ