ಕುಲಬರಗಿ: ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಭರ್ಜರಿ ಆರಂಭ ನೀಡಲಿದ್ದಾರೆ. ಇಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತವರು ಕುಲಬರಗಿಯಲ್ಲಿ ಪ್ರಚಾರ ಆರಂಭಿಸಲಿದ್ದಾರೆ.
ಕುಲಬರಗಿಯಲ್ಲಿ ಇಂದು ಮೋದಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಡಿಎಆರ್ ಮೈದಾನದಿಂದ ಎನ್.ವಿ ಮೈದಾನದವರೆಗೆ ಸುಮಾರು 1 ಕಿ.ಮೀ.ರೋಡ್ ಶೋ ನಡೆಸಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದ್ದು, ಜನರು ಮೋದಿ ಆಗಮನಕ್ಕಾಗಿ ರಸ್ತೆ ಪಕ್ಕ ಕಾದು ನಿಂತಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಎನ್ ವಿ ಮೈದಾನದಲ್ಲಿ ಸುಮಾರು 2 ಲಕ್ಷ ಜನರನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಚುನಾವಣೆ ನಿಮಿತ್ತ ಇದು ಮೊದಲ ಸಾರ್ವಜನಿಕ ಸಮಾವೇಶವಾಗಿದೆ. ಮೋದಿ ಸಮಾವೇಶಕ್ಕಾಗಿ ಸುಮಾರು 50 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ದಿನಾಂಕ ಮತ್ತು ನೀತಿ ಸಂಹಿತೆ ಕುರಿತು ಪ್ರಕಟಣೆ ನೀಡಲಿದೆ. ಅದರೊಂದಿಗೆ ದೇಶದಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ತಡೆ ಬೀಳಲಿದೆ.