ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ದಿನಾಂಕ ಯಾವಾಗ ಎಂಬ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ. ಚುನಾವಣಾ ಆಯೋಗ ನಾಳೆ ಲೋಕಸಭೆ ಚುನಾವಣೆ ನಡೆಯಲಿರುವ ದಿನಾಂಕ ಪ್ರಕಟಿಸಲಿದೆ.
ನಿನ್ನೆಯಷ್ಟೇ ಚುನಾವಣಾ ಆಯೋಗಕ್ಕೆ ಇಬ್ಬರು ನೂತನ ಮುಖ್ಯಸ್ಥರನ್ನು ನೇಮಿಸಲಾಗಿತ್ತು. ಕೇರಳ ಮೂಲದ ಜ್ಞಾನೇಶ್ ಕುಮಾರ್ ಮತ್ತು ಪಂಜಾಬ್ ಮೂಲದ ಸುಖಬೀರ್ ಸಿಂಗ್ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಪ್ರಧಾನಿ ಮೋದಿ ನೇತೃತ್ವದ ಸಮಿತಿ ನೂತನ ಮುಖ್ಯಸ್ಥರನ್ನು ನೇಮಿಸಿತ್ತು.
ನಾಳೆ ಅಪರಾಹ್ನ 3 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚುನಾವಣಾ ಆಯುಕ್ತರು ಲೋಕಸಭಾ ಚುನಾವಣೆ ದಿನಾಂಕ ಪ್ರಕಟಿಸಲಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾ, ಸುದ್ದಿವಾಹಿನಿಗಳು ಮತ್ತು ಯೂ ಟ್ಯೂಬ್ ಮುಖಾಂತರ ಲೈವ್ ಆಗಿ ವೀಕ್ಷಿಸಬಹುದಾಗಿದೆ.
ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೇ ಚುನಾವಣಾ ನೀತಿ ಸಂಹಿತೆಯೂ ಜಾರಿಯಾಗಲಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಏಪ್ರಿಲ್ ನಲ್ಲಿ ಚುನಾವಣೆ ನಡೆಯುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿತ್ತು. ಇದಕ್ಕೆ ಚುನಾವಣಾ ಆಯೋಗವೇ ಸ್ಪಷ್ಟನೆಯನ್ನೂ ನೀಡಿತ್ತು.