ಸುರೇಶ್ ಬಂಧಿತನಾಗಿದ್ದು ಮತ್ತೋರ್ವ ಕಾನೂನುಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಸುರೇಶ್ ನಗರದಲ್ಲಿ ಜ್ಯೊಮೊಟೊ ಕಂಪೆನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸಹಜವಾಗಿ ಎಲ್ಲಾ ಏರಿಯಾಗಳ ಬಗ್ಗೆ ತಿಳಿದುಕೊಂಡಿದ್ದ. ಸುಲಭವಾಗಿ ಹಣ ಸಂಪಾದನೆ ಮಾಡಲು ಸರಗಳ್ಳತನ ಮಾಡಲು ಸಂಚು ರೂಪಿಸಿದ್ದ. ತನ್ನದೇ ಊರಿನ ಪರಿಚಯಸ್ಥನಾಗಿದ್ದ 10ನೇ ತರಗತಿ ವಿದ್ಯಾರ್ಥಿಯನ್ನು ಪುಸಲಾಯಿಸಿ ನಗರಕ್ಕೆ ಕರೆತಂದಿದ್ದ. ಒಂದೇ ಬೈಕಿನಲ್ಲಿ ತೆರಳಿ ಒಂಟಿಯಾಗಿ ಓಡಾಡುವ ವೃದ್ದೆ ಹಾಗೂ ಮಹಿಳೆಯನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು. ಕೃತ್ಯವೆಸಗಿದ ಬಳಿಕ ಊರಿಗೆ ಹೋಗಿ ತಲೆಮರೆಸಿಕೊಳ್ಳುತ್ತಿದ್ದರು. ಕೆಲ ತಿಂಗಳ ಬಳಿಕ ಮತ್ತೆ ನಗರಕ್ಕೆ ಬಂದು ಅಪರಾಧ ಕೃತ್ಯವೆಸಗುತ್ತಿದ್ದರು. ಇದೇ ರೀತಿ ವಿವೇಕ ನಗರ, ಗಿರಿನಗರ, ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು ಐದು ಸರಗಳ್ಳತನ ಹಾಗೂ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿರುವುದಾಗಿ ನಗರ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.