ಅಮಾಯಕನ ಮೇಲೆ ಪೊಲೀಸ್ ದೌರ್ಜನ್ಯ: ಆರೋಪ

ಸೋಮವಾರ, 6 ಆಗಸ್ಟ್ 2018 (20:02 IST)
ಕ್ಷುಲ್ಲಕ ಕಾರಣಕ್ಕೆ ತುಮಕೂರು ಜಿಲ್ಲೆ‌ ಹುಲಿಯೂರು ದುರ್ಗದ ಪೊಲೀಸರು ವ್ಯಕ್ತಿಯ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಅಮಾಯಕನನ್ನ ಬಂಧಿಸಿ  ಮನ ಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ಘಟನೆ ನಡೆದಿದ್ದು, 40 ವರ್ಷದ ಪದ್ಮನಾಭ ಎನ್ನುವ ವ್ಯಕ್ತಿಯನ್ನ ವಶಕ್ಕೆ ಪಡೆದು ಮನಸೋ ಇಚ್ಚೆ ಥಳಿಸಿ  ದೌರ್ಜನ್ಯ ನಡೆಸಿದ್ದಾರೆ. ಮನೆಯ ಮುಂದೆ ಷಟಲ್ ಕಾಕ್ ಆಡುತ್ತಿದ್ದ ಪದ್ಮನಾಭನನ್ನ ಮನೆಗೆ ಹೋಗೋ ಎಂದು ಪೊಲೀಸರು ಗದರಿಸಿದ್ದಾರೆ. ಇದೇ ವೇಳೆ ಪೊಲೀಸರ ಮಾತಿಗೆ ಪ್ರತ್ಯುತ್ತರ ನೀಡಿದ್ದಕ್ಕೆ ಕೋಪಗೊಂಡ ಹುಲಿಯೂರುದುರ್ಗ ಪೊಲೀಸ್ ಠಾಣೆಯ ಎ.ಎಸ್.ಐ ನಾರಾಯಣಸ್ವಾಮಿ ಹಾಗೂ ಪೇದೆ ರಂಗಸ್ವಾಮಿ ಕಳೆದ ರಾತ್ರಿ‌ ಪದ್ಮನಾಭನ ಮನೆಗೆ ನುಗ್ಗಿ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೈ ತುಂಬಾ ರಕ್ತ ಹೆಪ್ಪು ಗಟ್ಟುವಂತೆ ಹಲ್ಲೆ ನಡೆಸಿರುವ ಪೊಲೀಸರು ರಾಕ್ಷಸತನ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಇದರೊಟ್ಟಿಗೆ ಪದ್ಮನಾಭ ವಿರುದ್ದ ಕರ್ತವ್ಯ ಅಡ್ಡಿ ಪ್ರಕರಣ ದಾಖಲಿಸಿ ಕುಣಿಗಲ್ ಜೆಎಂಎಫ್ ಸಿ ಕಿರಿಯ ಶ್ರೇಣಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಪದ್ಮನಾಭರನ್ನ ನ್ಯಾಯಾಂಗ ಬಂಧನದಲ್ಲಿಟ್ಟು ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪದ್ಮನಾಭ ಮೈಮೇಲೆ ತೀವ್ರ ಗಾಯಗಳಾಗುವಂತೆ ದೌರ್ಜನ್ಯ ನಡೆಸಿರುವ ಪೊಲೀಸರ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ