ಎಂಇಎಸ್ ಜತೆ ಪೊಲೀಸರ ಶಾಮೀಲು: ನೇಕಾರರು ಅರೆ ಬೆತ್ತಲೆ ಪ್ರತಿಭಟನೆ
ಶುಕ್ರವಾರ, 23 ಮಾರ್ಚ್ 2018 (17:43 IST)
ನಗರದಲ್ಲಿ ಮಾ. 22ರಂದು ನಡೆದಿದ್ದ ದೇವರ ದಾಸಿಮಯ್ಯ ಜಯಂತಿ ವೇಳೆ ವಡಗಾವಿ ರಸ್ತೆಯೊಂದಕ್ಕೆ ಅಳವಡಿಸಲಾಗಿದ್ದ ಕನ್ನಡ ನಾಮಫಲಕವನ್ನು ಪೊಲೀಸರು ಕಿತ್ತು ಹಾಕಿರುವ ಕ್ರಮ ಖಂಡಿಸಿ ನೇಕಾರರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಎಂಇಎಸ್ ಜತೆಗೆ ಪೊಲೀಸರು ಸಹ ಕೈ ಜೋಡಿಸಿದ್ದಾರೆ ಎಂದು ದೂರಿರುವ ಸರ್ವೋದಯ ಸ್ವಯಂ ಸೇವಾ ಸಂಘಟನೆ ಹಾಗೂ ನೇಕಾರರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಹಾಗೂ ಹಿರಿಯ ಹೋರಾಟಗಾರ ರಾಮಚಂದ್ರ ಢವಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರವು ನೇಕಾರರು ಮತ್ತು ಕನ್ನಡಿಗರಿಗೆ ತೀವ್ರ ಅನ್ಯಾಯ ಮಾಡಿದೆ ಎಂದು ಸರಕಾರದ ವಿರುದ್ಧ ಘೋಷಣೆ ಕೂಗಿ ಬಾಯಿ ಬಡಿದುಕೊಂಡು ಕಿಡಿ ಕಾರಿದರು.
ಸಮಸ್ಯೆಗೆ ಪರಿಹಾರ ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆವನ್ನು ಡಿಸಿಪಿ ಮಹಾನಿಂಗ ನಂದಗಾವಿ ನೀಡಿದ್ದಾರೆ.