ಒರಿಜಿನಲ್ ಕಾಂಗ್ರೆಸಿಗರಲ್ಲ ಎಂದು ಪ್ರಹ್ಲಾದ್ ಜೋಶಿ ಟೀಕೆ

ಶನಿವಾರ, 20 ಆಗಸ್ಟ್ 2022 (17:30 IST)
ಕಾಂಗ್ರೆಸ್ ನಾಯಕರು ಸಾವರ್ಕರ್​​ರನ್ನು ಗುರಿಯಾಗಿಸಿಕೊಂಡು ನೀಡುತ್ತಿರುವ ಹೇಳಿಕೆಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದು, "ಕಾಂಗ್ರೆಸ್‌ನ ಮೊದಲ ಕುಟುಂಬ"ದ ಕೊಡುಗೆಯನ್ನು ಪ್ರಶ್ನಿಸಿದ್ದಾರೆ. ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ‌ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ಆಗಲಿ ಬೇರೆಯವರಿಗೆ ಆಗಲಿ ಮೊಟ್ಟೆ ಎಸೆಯುವುದು ತಪ್ಪು. ಮೊಟ್ಟೆ ಎಸೆದಿದ್ದು ಸರಿಯಲ್ಲ. ಕಪ್ಪು ಧ್ವಜ ಪ್ರದರ್ಶನ ಮಾಡುವವರ ಪರ ನಾನು ಇಲ್ಲ. ಅದು ಸಮರ್ಥನೀಯವಲ್ಲ. ಆದರೆ ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಸಾವರ್ಕರ್ ಬಗ್ಗೆ ವಿಶ್ವಾಸ, ಶ್ರದ್ಧೆ ಇದ್ದವರಿಗೆ ಅವರು ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಸಾವರ್ಕರ್ ಗುರುತಿಸಲ್ಪಡುವ ಭಾರತದ ಸುಪುತ್ರ ಎಂದು ಸ್ವತಃ ಇಂದಿರಾಗಾಂಧಿ ಅವರು ಹೇಳಿದ್ದರು. ಮಹಾತ್ಮ ಗಾಂಧಿಜೀ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಸಾವರ್ಕರ್ ಬಿಡುಗಡೆಗೆ ಬ್ರಿಟೀಷ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಅವರೆಲ್ಲ ಒರಿಜಿನಲ್ ಕಾಂಗ್ರೆಸಿಗರು.‌ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಾವರ್ಕರ್ ಅವರ ಹೋರಾಟ, ವ್ಯಕ್ತಿತ್ವಕ್ಕೆ ಗೌರವ ಕೊಡುತ್ತಿದ್ದರು. ಈಗಿರುವವರು ನಕಲಿ ಕಾಂಗ್ರೆಸಿಗರು. ಇವರು ಸಾವರ್ಕರ್ ವಿರುದ್ಧ ಮಾತನಾಡುತ್ತಿದ್ದಾರೆ. ಇವರು ಒರಿಜಿನಲ್ ಕಾಂಗ್ರೆಸಿಗರಲ್ಲ ಎಂದು ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ