ತುಮಕೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಎಸ್‌ಐಟಿ ವಿಚಾರಣೆಗೆ ಬರುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿರುವುದನ್ನು ಸ್ವಾಗತ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಈ ಪ್ರಕರಣದ ಇಡೀ ಜಗತ್ತೇ ಮಾತನಾಡುವ ಸಂದರ್ಭದಲ್ಲಿ ಅವರನ್ನು ಕರೆತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿತ್ತು. ಪ್ರಧಾನಮಂತ್ರಿಗೆ ಮುಖ್ಯಮಂತ್ರಿಗಳು ಎರಡು ಬಾರಿ ಪತ್ರ ಬರೆದರು. ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಿದ್ದರು ಎಂದು ತಿಳಿಸಿದ್ದಾರೆ.
ಪ್ರಜ್ವಲ್ ವಿಚಾರಣೆಗೆ ಬರುತ್ತೇನೆ ಎಂದು ಹೇಳಿರುವುದನ್ನು ನಾವು ಸ್ವಾಗತ ಮಾಡುತ್ತೇವೆ. ಎಸ್ಐಟಿ ಬಳಿ ಏನು ಸಾಕ್ಷ್ಯಗಳಿವೆಯೋ, ಅವುಗಳ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಪ್ರಜ್ವಲ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ನಮಗೆ ಸರಿಯಾರಿ ಸಹಕಾರ ಕೊಡಲಿಲ್ಲ. ಡಿಪ್ಲೊಮ್ಯಾಟಿಕ್ ಪಾಸ್ ಪೊರ್ಟ್ ರದ್ದು ಮಾಡುತ್ತೇವೆ ಎಂದು ಹೇಳಿದರು. ನಮ್ಮ ಪತ್ರಗಳಿಗೆ ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಅವರು ಏನೂ ಮಾಡಿಲ್ಲ ಎಂದು ಅರ್ಥ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಪ್ರಜ್ವಲ್ ಮಾತನಾಡಿರುವ ವಿಡಿಯೊ ನೋಡಿರಲಿಲ್ಲ. ಅದನ್ನು ನೋಡಿದಾಗ ಕನ್ಫರ್ಮ್ ಆಯ್ತು. ಅವರು ಏನಾದರೂ ಹೇಳಿಕೊಳ್ಳಲಿ, ಅವರು ಹೇಳಿದಕ್ಕೆ ನಾನು ಉತ್ತರ ಕೊಡಲಿಕ್ಕೆ ಹೋಗಲ್ಲ ಎಂದು ಹೇಳಿದ್ದಾರೆ.