ನವದೆಹಲಿ: ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣದಲ್ಲಿ ಎಸ್‌ಐಟಿಗೆ ಬೇಕಾಗಿರುವ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ನೀಡಿ ಶಾಕ್ ಕೊಟ್ಟಿದೆ.
ನೋಟಿಸ್ ಅನ್ವಯ ವಿದೇಶಕ್ಕೆ ತೆರಳಿದ ಬಗ್ಗೆ ಹಾಗೂ ವಾಪಾಸ್ ಬರುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈ ಸಂಬಂಧ ೧೦ ದಿನಗಳ ಒಳಗೆ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿಯನ್ನು ನೀಡುವಂತೆ ಪ್ರಜ್ವಲ್ ರೇವಣ್ಣಗೆ ಸೂಚಿಸಲಾಗಿದೆ.
ಪೆನ್‌ಡ್ರೈವ್ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಅವರು ದೇಶ ಬಿಟ್ಟು ಜರ್ಮನಿಗೆ ಓಡಿ ಹೋಗಿದ್ದರು. ಎಸ್‌ಐಟಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು, ಅದು ಯಾವುದಕ್ಕೂ ಕ್ಯಾರೇ ಅನ್ನದೇ ಅಲ್ಲಿ ಕೂತಿದ್ದಾರೆ. ಇನ್ನೂ ತನಿಖೆಗೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಇದರ ಬೆನ್ನಲ್ಲೇ ಇದೀಗ ವಿದೇಶಾಂಗ ಸಚಿವಾಲಯ ಪ್ರಜ್ವಲ್ಗೆ ಶೋಕಾಸ್ ನೋಟಿಸ್ ನೀಡಿದೆ. ಈ ನೋಟಿಸ್ ಮೂಲಕ ಪಾಸ್ಪೋರ್ಟ್ ರದ್ದುಗೊಳಿಸುವ ಬಗ್ಗೆ ಪ್ರಜ್ವಲ್ಗೆ ಉತ್ತರ ಕೇಳಿದೆ. ಇದರಿಂದ ಪ್ರಜ್ವಲ್ಗೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.