ಬೆಂಗಳೂರು: ಒಂದೆಡೆ ಮಗ ಪ್ರಜ್ವಲ್ ರೇವಣ್ಣಗೆ ಕೋರ್ಟ್ ನಲ್ಲಿ ಶಿಕ್ಷೆ ಪ್ರಮಾಣ ಪಕ್ರಟವಾಗುತ್ತಿದ್ದರೆ ಇತ್ತ ತಂದೆ ಎಚ್ ಡಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಎಲ್ಲಿದ್ದಾರೆ?
ನಿನ್ನೆ ಪ್ರಜ್ವಲ್ ರೇವಣ್ಣರನ್ನು ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ಜನಪ್ರತಿನಿಧಿಗಳ ಕೋರ್ಟ್ ಪ್ರಜ್ವಲ್ ಗೆ ಕೆಲವೇ ಕ್ಷಣಗಳಲ್ಲಿ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಮಗ ಪ್ರಜ್ವಲ್ ಗೆ ಕೋರ್ಟ್ ನಲ್ಲಿ ಶಿಕ್ಷೆ ಪ್ರಮಾಣ ಪ್ರಕಟವಾಗುತ್ತಿದ್ದರೆ ತಂದೆ ಎಚ್ ಡಿ ರೇವಣ್ಣ ಹೊಳೆನರಸೀಪುರದಲ್ಲಿರುವ ಮನೆ ದೇವರಿಗೆ ಪೂಜೆ ಸಲ್ಲಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಇತ್ತ ಭವಾನಿ ರೇವಣ್ಣ ಪೂಜೆ ಮುಗಿಸಿ ಬಸವನಗುಡಿಯ ಮನೆಯಲ್ಲಿಯೇ ಆತಂಕದಿಂದ ಕ್ಷಣ ಕ್ಷಣದ ಮಾಹಿತಿ ನೋಡುತ್ತಿದ್ದಾರೆ. ರೇವಣ್ಣ ನಿನ್ನೆಯೇ ಮಗ ದೋಷಿ ಎಂದು ತೀರ್ಪು ಪ್ರಕಟವಾಗುತ್ತಿದ್ದಂತೇ ಮೌನಕ್ಕೆ ಶರಣಾಗಿದ್ದರು.
ಇಂದೂ ಮಾಧ್ಯಮಗಳಿಂದ ದೂರವೇ ಉಳಿದಿದ್ದು, ದೇವರ ಪ್ರಾರ್ಥನೆಯಲ್ಲಿ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಮಗನಿಗೆ ಆದಷ್ಟು ಶಿಕ್ಷೆಯ ಪ್ರಮಾಣ ಕಡಿಮೆಯಾಗಲಿ ಎಂದು ಪ್ರಾರ್ಥನೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.