ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿತರಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನಿಖಾಧಿಕಾರಿಗಳನ್ನೇ ಪ್ರಶ್ನೆ ಮಾಡಿದ್ದಾರೆ.
ಇಂದಿಡೀ ಪ್ರಜ್ವಲ್ ರೇವಣ್ಣರನ್ನು ವಿಚಾರಣೆ ನಡೆಸಲಾಗುತ್ತದೆ. ನಿನ್ನೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಜ್ವಲ್ ರನ್ನು ಆರು ದಿನಗಳ ಕಾಲ ಎಸ್ಐಟಿ ವಶಕ್ಕೊಪ್ಪಿಸಲಾಗಿತ್ತು.
ಇದೀಗ ಎಸ್ಐಟಿ ತಂಡ ಪ್ರಜ್ವಲ್ ರೇವವಣ್ಣರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಪ್ರಕರಣದ ಬಗ್ಗೆ ಏನೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ, ಮಾಹಿತಿಯಿಲ್ಲ ಎಂದೇ ಪ್ರಜ್ವಲ್ ಹೇಳುತ್ತಿದ್ದಾರೆ.
ಈ ನಡುವೆ ತಮ್ಮನ್ನು ಪ್ರಶ್ನೆ ಮಾಡುತ್ತಿರುವ ತನಿಖಾಧಿಕಾರಿಗಳಿಗೇ ಪ್ರಜ್ವಲ್ ಮರುಪ್ರಶ್ನೆ ಮಾಡಿದ್ದಾರೆ. ನನ್ನ ವಿರುದ್ಧ ದೂರು ನೀಡಿದವರು ಯಾರು ಎಂದು ಕೇಳಿದ್ದಾರೆ. ನಮ್ಮ ತೋಟ, ಮನೆಯಲ್ಲಿ ಕೆಲಸ ಮಾಡುವ ಹಲವು ಮಹಿಳೆಯರಿದ್ದಾರೆ. ಅವರ ಪೈಕಿ ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ದೂರು ಕೊಟ್ಟವರು ಯಾರು ಎಂದು ಎಸ್ಐಟಿ ಅಧಿಕಾರಿಗಳಿಗೆ ಮರುಪ್ರಶ್ನೆ ಮಾಡಿದ್ದಾರೆ.
ಆಗ ಅಧಿಕಾರಿಗಳು ಪ್ರಜ್ವಲ್ ಗೆ ಸಂತ್ರಸ್ತ ಮಹಿಳೆಯರ ಫೋಟೋ ತೋರಿಸಿದ್ದಾರೆ. ಆದರೆ ಅವರನ್ನು ನೋಡಿದ ಪ್ರಜ್ವಲ್ ಇವರೆಲ್ಲಾ ಯಾರು ಅಂತಾನೇ ನನಗೆ ಗೊತ್ತಿಲ್ಲ. ನಾಲ್ಕು ವರ್ಷದ ಹಿಂದೆ ನಡೆದಿದ್ದಾದರೆ ಇಷ್ಟು ದಿನ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.