ಬೆಂಗಳೂರು: ಹುಟ್ಟಿನಿಂದ ಐಷಾರಾಮಿ ಜೀವನದಲ್ಲೇ ಕಳೆದ ಪ್ರಜ್ವಲ್ ರೇವಣ್ಣ ಈಗ ನಿಜವಾದ ಸೆರೆ ವಾಸದ ಅನುಭವ ಪಡೆಯುತ್ತಿದ್ದಾರೆ. ಜೈಲಿನಲ್ಲಿ ಹೇಗಿದ್ದಾರೆ ಪ್ರಜ್ವಲ್ ರೇವಣ್ಣ, ಅವರ ದಿನಚರಿ ಏನಾಗಲಿದೆ ಇಲ್ಲಿದೆ ವಿವರ.
ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿತ್ತು. ಇದೀಗ ಅವರಿಗೆ ಜೀವತಾವಧಿವರೆಗೂ ಶಿಕ್ಷೆ ಘೋಷಿಸಲಾಗಿದೆ. ಇದರ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ರೇವಣ್ಣ ಕುಟುಂಬ ಸಿದ್ಧತೆಯೂ ನಡೆಸಿದೆ.
ಆದರೆ ಸದ್ಯಕ್ಕಂತೂ ಪ್ರಜ್ವಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇತರೆ ಖೈದಿಗಳಂತೆ ಸಮವಸ್ತ್ರ ಧರಿಸಬೇಕು. ಇಷ್ಟು ದಿನ ವಿಚಾರಾಣಾಧೀನ ಖೈದಿಯಾಗಿದ್ದ ಪ್ರಜ್ವಲ್ ಸಾಮಾನ್ಯ ಬಟ್ಟೆ ಧರಿಸಬಹುದಿತ್ತು. ಅವರಿಗೆ ಕೆಲಸವೂ ಕೊಡಲಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ. ಪ್ರಜ್ವಲ್ ಕೂಡಾ ಇತರೆ ಖೈದಿಗಳಂತೆ ಕೆಲಸ ಮಾಡಬೇಕು. ಸಮವಸ್ತ್ರ ಧರಿಸಬೇಕು. ಇತರೆ ಖೈದಿಗಳಿಗೆ ಅನ್ವಯವಾಗುವ ನಿಯಮ ಅವರಿಗೂ ಅನ್ವಯವಾಗಲಿದೆ. ಭಾನುವಾರ ಬೆಳಿಗ್ಗೆ ಪ್ರಜ್ವಲ್ ರೇವಣ್ಣ ಬಿಳಿ ಸಮವಸ್ತ್ರ ನೀಡಲಾಗಿದೆ. ಮೊನ್ನೆ ರಾತ್ರಿ ಶಿಕ್ಷೆ ಘೋಷಣೆಯಾದ ಬಳಿಕ ಪ್ರಜ್ವಲ್ ಕಣ್ಣೀರು ಸುರಿಸುತ್ತಲೇ ಜೈಲಿಗೆ ತೆರಳಿದ್ದರು. ಇದಾದ ಬಳಿಕ ರಾತ್ರಿ ಊಟವೂ ಮಾಡದೇ ಮೌನಕ್ಕೆ ಶರಣಾಗಿದ್ದರು.
ಜೀವಿತಾವಧಿಯವರೆಗೂ ಜೈಲು ಶಿಕ್ಷೆ ಸಿಗಬಹುದು ಎಂದು ಬಹುಶಃ ಅವರು ಕನಸಿನಲ್ಲೂ ಅಂದುಕೊಂಡಿರಲ್ಲ. ಹೀಗಾಗಿ ಇದು ಅವರಿಗೆ ಆಘಾತ ತಂದಿದೆ. ಜೈಲಿನಲ್ಲಿ ಇನ್ನು ತಿಂಗಳಿಗೆ 6-8 ದಿನಗಳವರೆಗೆ ಇತರೆ ಖೈದಿಗಳಂತೆ ಪ್ರಜ್ವಲ್ ಕೂಡಾ ಕೆಲಸ ಮಾಡಬೇಕು. ಇದಕ್ಕೆ ಅವರಿಗೆ 525 ರೂ. ಕೂಲಿ ಸಿಗಲಿದೆ. ಇಷ್ಟು ದಿನ ಸುಖದ ಸುಪ್ಪತ್ತಿಗೆಯಲ್ಲೇ ಕಳೆದಿದ್ದ ಪ್ರಜ್ವಲ್ ಗೆ ಈಗ ನಿಜವಾದ ಸತ್ವ ಪರೀಕ್ಷೆ ಎದುರಾಗಲಿದೆ.