ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ: ಸಿಎಂ ಮನೆಗೆ ಮುತ್ತಿಗೆ ಹಾಕಲೆತ್ನಿಸಿದ ಬಿಜೆಪಿ ಕಾರ್ಯಕರ್ತರು

Krishnaveni K

ಗುರುವಾರ, 30 ಮೇ 2024 (11:58 IST)
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ 187 ಕೋಟಿ ರೂ. ಅವ್ಯವಹಾರದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಎಸ್.ಟಿ ಮೋರ್ಚಾ ವತಿಯಿಂದ ಇಂದು ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

‘ಧಿಕ್ಕಾರ ಧಿಕ್ಕಾರ, ಸಚಿವರಿಗೆ ಧಿಕ್ಕಾರ’, ‘ಸರಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗಲಾಯಿತು. ಪೊಲೀಸರು ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬಂಧಿಸಿದರು. ಅಕ್ರಮವಾಗಿ ಅಮಾಯಕರಾದ ತಮ್ಮನ್ನು ಬಂಧಿಸಲಾಗುತ್ತಿದೆ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

‘ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ’ ಕೂಗಿದ ಕಾರ್ಯಕರ್ತರು, ‘ಅಯ್ಯಯ್ಯೋ ಅನ್ಯಾಯ, ಅನ್ಯಾಯ’ ಎಂದು ಘೋಷಣೆ ಕೂಗಿದರು. ಸುಮಾರು 187 ಕೋಟಿ ರೂಪಾಯಿ ಅವ್ಯವಹಾರದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಡೆತ್ ನೋಟಿನಲ್ಲಿ ಸಚಿವರ ಹೆಸರನ್ನು ಉಲ್ಲೇಖಿಸಿದ್ದು, ಸಚಿವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಲಾಯಿತು.

ಚಂದ್ರಶೇಖರ್ ಕುಟುಂಬಕ್ಕೆ ಧೈರ್ಯ ತುಂಬಿದ ಬಿ.ವೈ.ವಿಜಯೇಂದ್ರ
ಸುಮಾರು 187 ಕೋಟಿ ರೂಪಾಯಿ ಅವ್ಯವಹಾರದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಮನೆಗೆ ಇಂದು ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಕುಟುಂಬದವರಿಗೆ ಧೈರ್ಯ ತುಂಬಿದರು.

ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಧೈರ್ಯ ವಹಿಸುವಂತೆ ತಿಳಿಸಿದರು. ಲ್ಯಾಪ್ ಟಾಪ್ ಮತ್ತಿತರ ವಸ್ತುಗಳನ್ನು ಒಯ್ದ ಕುರಿತು ಕುಟುಂಬದವರು ಮಾಹಿತಿ ನೀಡಿದರು. ಮನೆಯಲ್ಲಿರುವ ಸಾಕ್ಷ್ಯವಸ್ತುಗಳನ್ನು ತೆಗೆದುಕೊಂಡು ಹೋಗಲು ಅಧಿಕಾರಿಗಳು ತರಾತುರಿಯಲ್ಲಿ ಬಂದಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ