ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ವಿದೇಶದಿಂದ ವಾಪಸ್ಸಾಗುವ ಸಾಧ‍್ಯತೆಯಿದೆ.
ಏಪ್ರಿಲ್ 27 ರಂದು ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವೂ ಬೆಳಕಿಗೆ ಬಂದಿತ್ತು. ಇದರ ಸುಳಿವು ಸಿಕ್ಕಿಯೇ ಅವರು ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಇದೆ.
ಇದರ ನಡುವೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ಒಪ್ಪಿಸಿದ್ದು, ಪ್ರಜ್ವಲ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಅವರ ತಂದೆ ಶಾಸಕ ಎಚ್ ಡಿ ರೇವಣ್ಣ ಕೂಡಾ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಆದರೆ ಇದುವರೆಗೆ ತಂದೆ-ಮಗ ಇಬ್ಬರೂ ವಿಚಾರಣೆಗೆ ಹಾಜರಾಗಿಲ್ಲ.
ಈ ನಡುವೆ ಪ್ರಜ್ವಲ್ ಮೇ 3 ರಂದು ವಿದೇಶದಿಂದ ವಾಪಸ್ಸಾಗಲಿದ್ದಾರೆ ಎಂಬ ಮಾಹಿತಿಯಿತ್ತು. ಇಂದು ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎಂಬ ಮಾಹಿತಿಯಿದೆ. ಹಾಗಿದ್ದರೂ ಅವರು ವಿಚಾರಣೆಗೆ ಹಾಜರಾಗಲು ಏಳು ದಿನಗಳ ಕಾಲಾವಕಾಶ ಕೇಳಿದ್ದಾರೆ.