ರಾಜ್ಯಾದ್ಯಂತ ಈಗ ವಕ್ಫ್ ಬೋರ್ಡ್ ನೋಟಿಸ್ ವಿಚಾರ ಭಾರೀ ಸದ್ದು ಮಾಡುತ್ತಿದೆ. ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧ ಕಡೆ ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿರುವುದು ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಿಂದೂಗಳ ವಿರುದ್ಧ ಓಲೈಕೆ ರಾಜಕಾರಣ, ತುಷ್ಠೀಕರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ದಶಕಗಳಿಂದ ಅಧಿಕಾರ ಕಳೆದುಕೊಂಡರೂ ಬುದ್ಧಿ ಬಂದಿಲ್ಲ. ಜಾತ್ಯಾತೀತ ಹಣೆಪಟ್ಟಿಯಲ್ಲಿ ಹಿಂದೂಗಳಿಗೆ ದ್ರೋಹವೆಸಗುತ್ತಿದೆ.
ಜಮೀರ್ ಅವರಿಗೆ ಮತಾಂಧತೆ ಆವರಿಸಿದೆ. ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಲಿ. ಅಪರಿಮಿತ ಅಧಿಕಾರ ವ್ಯಾಪ್ತಿಯ ವಕ್ಫ್ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಹೊರಟಿದೆ. ಇದಕ್ಕೆ ಕಾಂಗ್ರೆಸ್ ಓಲೈಕೆ ಬಿಟ್ಟು ಬೆಂಬಲಿಸಲಿ. ಜಗತ್ತಿನ ಯಾವ ಮುಸ್ಲಿಮ್ ರಾಷ್ಟ್ರದಲ್ಲೂ ವಕ್ಫ್ ಕಾನೂನಿಲ್ಲ. ಹಾಗಿರುವಾಗ ಭಾರತದಲ್ಲಿ ಕಾಂಗ್ರೆಸ್ ಕುಮ್ಮಕ್ಕಿನಿಂದ ಇಂತಹದ್ದೊಂದು ಪ್ರಶ್ನಾತೀತ ವಕ್ಫ್ ಕಾನೂನು ಇದೆ. ದೇಶದ ಯಾವುದೇ ದೇವಸ್ಥಾನಗಳ ಜಾಗ ಒಂದಿಂಚೂ ಹೆಚ್ಚಾಗದೇ ಇರುವಾಗ ವಕ್ಫ್ ಗೆ ಲಕ್ಷ ಲಕ್ಷ ಆಸ್ತಿ ಬಂತು? ಇಲ್ಲಿದ್ದ ಮುಸ್ಲಿಮರು ಹಿಂದೂಗಳೇ ಆಗಿದ್ದವರು. ಬೆದರಿಕೆ, ಆಮಿಷಕ್ಕೆ ಬಲಿಯಾದವರು. ಹೀಗಿರುವಾಗ ವಕ್ಫ್ ಗೆ ಹೇಗೆ ಲಕ್ಷಾಂತರ ಜಮೀನು ಬಂತು ಎಂದು ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.