ಬೆಂಗಳೂರು: ಹೌದ್ರೀ ಕುಂಭಮೇಳಕ್ಕೆ ಹೋದರೆ ಬಡತನ ಹೇಗ್ರೀ ನಿವಾರಣೆಯಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ತಮ್ಮ ತಂದೆಯ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ದೆಹಲಿ ಚುನಾವಣೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋದರೆ ಬಡತನ ನಿವಾರಣೆಯಾಗಲ್ಲ ಎಂದು ಮೋದಿ, ಅಮಿತ್ ಶಾಗೆ ಟಾಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿಕೊಂಡು ಬಂದಿದ್ದರು.
ಈ ಕಾರಣಕ್ಕೆ ಮಾಧ್ಯಮಗಳು ಇಂದು ಪ್ರಿಯಾಂಕ್ ಖರ್ಗೆಗೆ ತಂದೆಯ ಮಾತನ್ನು ನೆನಪಿಸಿ ಡಿಕೆ ಶಿವಕುಮಾರ್ ಹೋಗಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಹೌದ್ರೀ ನಿಜ ಅಲ್ವಾ? ಕುಂಭಮೇಳಕ್ಕೆ ಹೋದರೆ ಬಡತನ ಹೇಗ್ರೀ ನಿವಾರಣೆಯಾಗುತ್ತದೆ? ಎಂದಿದ್ದಾರೆ.
ಭಕ್ತಿ ಎನ್ನುವುದು ಅವರವರ ವೈಯಕ್ತಿಕ. ನಿಮಗೆ ಗಂಗಾ ಸ್ನಾನ ಮಾಡುವುದರಿಂದ ಸಿಗುತ್ತೋ, ಗ್ರಂಥ ಓದುವುದರಿಂದ ಸಿಗುತ್ತೋ ಅದು ನಿಮಗೆ ಬಿಟ್ಟಿದ್ದು. ಆದರೆ ಧಾರ್ಮಿಕ ಆಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಬಾರದು ಎಂಬುದಷ್ಟೇ ನಮ್ಮ ಉದ್ದೇಶ. ಈಗ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಮಾಡುತ್ತಿರುವುದು ಅದನ್ನೇ. ತಮ್ಮ ರಾಜಕೀಯಕ್ಕಾಗಿ ಧರ್ಮ ಬಳಸಿಕೊಳ್ಳುತ್ತಿದ್ದಾರೆ. ಇದನ್ನೇ ನಾವು ಪ್ರಶ್ನೆ ಮಾಡುತ್ತಿರುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.