ಶುದ್ಧ ಕುಡಿಯುವ ನೀರು ಪೂರೈಕೆಗೆ ಸರ್ಕಾರದ ಆದ್ಯತೆ

ಗುರುವಾರ, 26 ಜನವರಿ 2017 (11:25 IST)
ಗ್ರಾಮೀಣ ಪ್ರದೇಶದಲ್ಲಿ ನೀರಿನ ಆಭಾವ ಆಗದಂತೆ ಸರ್ಕಾರ ಕ್ರಮ ವಹಿಸಿದ್ದು, ಪ್ರತಿಯೊಬ್ಬರಿಗೂ ಶುದ್ಧ ಕುಡಿಯವ ನೀರು ಒದಗಿಸುವುದು ಸರ್ಕಾರದ ಪ್ರಥಮ ಆದ್ಯತೆ ಆಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ. 
 
ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರ ತಾಲ್ಲೂಕಿನಲ್ಲಿ 53.11 ಕೋಟಿ ರೂ ವೆಚ್ಚದ ಅರಳಕುಪ್ಪೆ ಮತ್ತು ಇತರೆ 62 ಬಹು ಗ್ರಾಮಗಳ ಕುಡಿಯುವ ನೀರು ಯೋಜನೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.
 
1.5ಕೋಟಿ ಜನರಿಗೆ ಶುದ್ದ ಕುಡಿಯುವ ನೀರು: ರಾಜ್ಯದಲ್ಲಿ 8,500 ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿದ್ದು, 1.5 ಕೋಟಿ ಜನರಿಗೆ ಶುದ್ಧ ಕುಡಿಯವ ನೀರು ಸರಬರಾಜು ಆಗುತ್ತಿದೆ. ಶುದ್ಧ ಕುಡಿಯುವ ನೀರಿನ ಮೂಲಕ ಜನರಲ್ಲಿ ಆರೋಗ್ಯದ ಮಟ್ಟ ಸುಧಾರಣೆಯಾಗಿದ್ದು, ಶುದ್ಧ ಕುಡಿಯುವ ನೀರಿನಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 
ಕಳೆದ 6 ವರ್ಷಗಳಿಂದ ರಾಜ್ಯದಲ್ಲಿ ಬರದ ಛಾಯೆ ಇದ್ದು,ಎರಡು ವರ್ಷಗಳಿಂದ ಎಂದೂ ಕಾಣದ ಬರವನ್ನು ರಾಜ್ಯ ಎದುರಿಸುತ್ತಿದೆ. ಇದರಿಂದ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಅರ್ದದಷ್ಟು ನೀರು ಭರ್ತಿಯಾಗಿರುವುದಿಲ್ಲ. ಆದರಿಂದ ನೀರಿನ ಮೂಲದಿಂದ ಶುದ್ಧ ಕುಡಿಯವ ನೀರು ಸರಬರಾಜು ಮಾಡಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸರ್ಕಾರ ಹೆಚ್ಚಿನ ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುತ್ತಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
 
7100ಗ್ರಾಮಗಳಿಗೆ ನೀರು: ಪಾಂಡವಪುರ ತಾಲ್ಲೂಕಿನಲ್ಲಿ 178 ಗ್ರಾಮಗಳಿದ್ದು, ಅರಳುಕುಪ್ಪೆ ಮತ್ತು 62 ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ನೂರು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಪಾಂಡವಪುರ ತಾಲ್ಲೂಕಿನಲ್ಲಿ ಸಾಕಷ್ಟು ನೀರಿನ ಮೂಲಗಳಿದ್ದು ಉಳಿದ ಗ್ರಾಮಗಳಿಗೂ ಸಹಾ ಈ ಯೋಜನೆಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ