ಬೆಂಗಳೂರು: ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಇದರ ಬಗ್ಗೆ ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು ಇದೊಂಥರಾ ನಮಗೆ ನಾವೇ ಭಾರತ ರತ್ನ ಕೊಟ್ಟ ಹಾಗೆ ಎಂದಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ಮೇಲಿನ ಹಳೆಯ ಪ್ರಕರಣಗಳನ್ನು ಹಿಂಪಡೆಯಲಾಗಿದೆ.
2019 ರಲ್ಲಿ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇದರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಗಳನ್ನು ಈಗ ಹಿಂಪಡೆಯಲಾಗಿದೆ. ಇದರೊಂದಿಗೆ ಸುಮಾರು 62 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.
ಇದರ ಬಗ್ಗೆ ಸಾರ್ವಜನಿಕರು, ಬಿಜೆಪಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಾ ಅವರದ್ದೇ ಸರ್ಕಾರ, ಅವರದ್ದೇ ತೀರ್ಮಾನ. ಇದೊಂದು ರೀತಿಯಲ್ಲಿ ನಮಗೆ ನಾವೇ ಪ್ರಶಸ್ತಿ ಕೊಟ್ಟಂತೆ. ತಮ್ಮವರು ಕೊಲೆ, ಸುಲಿಗೆ ಮಾಡಿದ್ರೂ ಕೇಸ್ ವಾಪಸ್. ಬೇರೆಯವರು ಸಿಲ್ಲಿ ಕೇಸ್ ಆಗಿದ್ದರೂ ಅಂದರ್. ಇದು ಯಾವ ನ್ಯಾಯ ಎಂದು ಜನ ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಕೆಜಿ ಹಳ್ಳಿ ಗಲಭೆ ಕೇಸ್ ನ್ನು ಸಚಿವ ಸಂಪುಟ ಹಿಂಪಡೆದಿತ್ತು. ಆದರೆ ಬಳಿಕ ಹೈಕೋರ್ಟ್ ಇದನ್ನು ತಡೆ ಹಿಡಿದಿದ್ದು ಸರ್ಕಾರಕ್ಕೆ ಮುಖಭಂಗ ತಂದಿತ್ತು.