ಬಿಜೆಪಿ, ಜಡಿಎಸ್ ಒಂದು ವರ್ಷ ಮೊದಲು ಮೈತ್ರಿ ಮಾಡಿಕೊಂಡಿದ್ದರೆ ನಾವು ಅಧಿಕಾರದಲ್ಲಿರುತ್ತಿದ್ದೆವು: ಆರ್ ಅಶೋಕ್

Krishnaveni K

ಸೋಮವಾರ, 8 ಜುಲೈ 2024 (13:47 IST)
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಈ ಕೆಲಸವನ್ನು ಒಂದು ವರ್ಷ ಮೊದಲು ಮಾಡಿದ್ದರೂ ನಾವು ಈಗ ರಾಜ್ಯದಲ್ಲಿಅಧಿಕಾರದಲ್ಲಿರುತ್ತಿದ್ದೆವು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿದ್ದವು. ಜೆಡಿಎಸ್ ನಾಯಕ ಕುಮಾರಸ್ವಾಮಿ ಈಗ ಕೇಂದ್ರ ಮಂತ್ರಿಯೂ ಆಗಿದ್ದಾರೆ. ಲೋಕಸಭೆಗೆ ಮಾಡಿಕೊಂಡಿದ್ದ ಮೈತ್ರಿಯಿಂದಾಗಿ ಕಾಂಗ್ರೆಸ್ ಗೆ ಹೊಡೆತ ಬಿದ್ದಿತ್ತು. ಹೀಗಾಗಿ ಈಗ ಅಶೋಕ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.

ಒಂದು ವರ್ಷ ಮೊದಲು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೆ ನಾವು ಗೆಲ್ಲಬಹುದಾಗಿತ್ತು ಎಂದು ಆರ್ ಅಶೋಕ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಡಾ ಸುಧಾಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಕಾಂಗ್ರೆಸ್ ನ ಶ್ರೀಮಂತ ಅಭ್ಯರ್ಥಿಯ ಎದುರು ಸುಧಾಕರ್ ಗೆಲ್ಲುತ್ತಾರೋ ಎಂಬ ಅನುಮಾನವಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಜೊತೆಯಾಗಿ ಕೆಲಸ ಮಾಡಿದ್ದರಿಂದ ಗೆಲುವು ಕಾಣಲು ಸಾಧ್ಯವಾಯಿತು. ದೇವೇಗೌಡರಿಗೆ ಬಿಜೆಪಿ ಕೋಮುವಾದಿ ಪಕ್ಷವಲ್ಲ ಎಂದು ತಡವಾಗಿ ಗೊತ್ತಾಗಿದೆ. ಒಂದು ವರ್ಷ ಮೊದಲೇ ನಾವು ಮೈತ್ರಿ ಮಾಡಿಕೊಂಡಿದ್ದರೆ ಇಷ್ಟೊತ್ತಿಗೆ ಅಧಿಕಾರದಲ್ಲಿರುತ್ತಿದ್ದೆವು ಎಂದು ಅಶೋಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ