ಈ ಕಾರಣಕ್ಕೆ ಜಾತಿ ಗಣತಿ ಆಗಬೇಕು ಅಂತಿದ್ರು ರಾಹುಲ್ ಗಾಂಧಿ: ಮಧು ಬಂಗಾರಪ್ಪ

Sampriya

ಶುಕ್ರವಾರ, 2 ಮೇ 2025 (20:10 IST)
Photo Credit X
ಬೆಂಗಳೂರು: ರಾಹುಲ್ ಗಾಂಧಿ ಅವರು ಜಾತಿ ಗಣತಿಯಾಗಬೇಕು ಎಂದು ಸದಾ ಆಗ್ರಹ ಮಾಡುತ್ತಿದ್ದರು. ಅವರ ಮಾತಿಗೆ ಕೇಂದ್ರ ಮಣಿದಿದೆ. ಭಾರತ್ ಜೋಡೋ ಯಾತ್ರೆ ವೇಳೆ ನನ್ನ ತಂದೆಯವರನ್ನು ನೆನಪಿಸಿಕೊಂಡು, ‘ಮಧು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಜಾತಿ ಗಣತಿ ನಡೆಯಲೇ ಬೇಕುʼ ಎಂದಿದ್ದರು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು..

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಈ ನಿರ್ಧಾರ ಕಾಂಗ್ರೆಸ್ ಪಕ್ಷದ ಗೆಲುವು. ಸಮಾಜದಲ್ಲಿ ಸಮಾನತೆ ತರಬೇಕು ಎಂದರೆ ಜಾತಿಗಣತಿ ಅತಿ ಅವಶ್ಯಕ. ನಮ್ಮ ಕಾಂಗ್ರೆಸ್ ಸರ್ಕಾರ ಬಡವ, ಶ್ರೀಮಂತ ಎಲ್ಲರಿಗೂ ಯೋಜನೆಗಳನ್ನು ನೀಡಿದೆ. ಇದನ್ನು ಆಧರಿಸಿ ಯಾರು ಉಪಯೋಗ ಪಡೆದಿದ್ದಾರೆ ಎಂಬುದನ್ನು ನೋಡಬೇಕಲ್ಲವೇ. ಜಾತಿಗಣತಿ ನಡೆದರೆ ನಾವು ಕಟ್ಟುವ ತೆರಿಗೆ ಹಣ ಸಮಾನವಾಗಿ ಹಂಚಿಕೆಯಾಗುತ್ತದೆ.

ಜಾತಿಗಣತಿ ನಡೆಸಲು ಕೆಂದ್ರ ಸರ್ಕಾರ 500 ಕೋಟಿ ನೀಡುವುದಾಗಿ ಹೇಳಿದೆ. ರಫೆಲ್ ಯುದ್ದ ವಿಮಾನಗಳಿಗೆ 35 ಸಾವಿರ ಕೋಟಿ ಕೊಟ್ಟಿದ್ದಾರೆ. ನಮ್ಮ ದೇಶವನ್ನು ಕಾಯಲು ವಿಮಾನಗಳ ಅಗತ್ಯವಿದೆ. ಇಷ್ಟಾದರೂ ಸೈನ್ಯಕ್ಕೆ ಕಳೆದ ಎರಡು ವರ್ಷಗಳಿಂದ ಹುದ್ದೆಗಳನ್ನು ಭರ್ತಿ ಮಾಡಕೊಳ್ಳದ ಕಾರಣಕ್ಕೆ ಕಾಶ್ಮೀರದಲ್ಲಿ ಏನಾಗಿದೆ ಎಂದು ನಮಗೆ ತಿಳಿದಿದೆ.  ಈ 500 ಕೋಟಿ ಹಣ ಯಾವುದಕ್ಕೂ ಸಾಲುವುದಿಲ್ಲ. ಈ ಹಣವನ್ನು ಹೆಚ್ಚು ಮಾಡಬೇಕು.

ನಾವು ಒಂದಷ್ಟು ವಿಚಾರದಲ್ಲಿ ಮಾತ್ರ ಸಮಾನತೆ ಬೇಕು ಎಂದು ಹೇಳುವುದಿಲ್ಲ. ತೆರಿಗೆ ಹಂಚಿಕೆಯಲ್ಲಿಯೂ ಇದೇ ಸಮಾನತೆ ಬರಬೇಕು. ಗುಜರಾತಿಗೆ ಹಣ ನೀಡಿ ಎಂದು ಮೋದಿಯವರು ಅಲ್ಲಿನ ಮುಖ್ಯಮಂತ್ರಿಗಳಾಗಿದ್ದಾಗ ಆಗ್ರಹಿಸಿದ್ದರು. ಇದೇ ಮಾತನ್ನು ಅವರಿಗೆ ಈಗ ನೆನಪಿಸಬಹುದಲ್ಲವೇ?

ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಈ ಹಿಂದೆ ನಡೆಸಿದ್ದ ಜಾತಿಗಣತಿಯನ್ನು ಈಗ ಬಹಿರಂಗಗೊಳಿಸಿದ್ದೇವೆ. ಈ ಜಾತಿ ಗಣತಿ ಬಗ್ಗೆ ನೂರಾರು ಪ್ರಶ್ನೆಗಳು ಇರಬಹುದು. ಇದಕ್ಕೆ ಉತ್ತರ ಕೊಡುವ ಕರ್ತವ್ಯ ನಮ್ಮದು. ಸಂಸತ್ ಸೇರಿದಂತೆ ಪ್ರತಿ ಹಂತದಲ್ಲಿಯೂ ಜಾತಿಗಣತಿ ಬಗ್ಗೆ ಜನರ ಹಾಗೂ ಕೇಂದ್ರ ಸರ್ಕಾರ ಗಮನ ಸೆಳೆದ ರಾಹುಲ್ ಗಾಂಧಿ ಅವರಿಗೆ ಹಿಂದುಳಿದ ವರ್ಗಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಭಿನಂದನೆಗಳು.

ಜಾತಿಗಣತಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ನಡೆಸಬೇಕು. ನಮ್ಮ ರಾಜ್ಯದ ಬೆವರಿನ ಪಾಲನ್ನು ನೀಡಬೇಕು. ದೇಶದ ಎಲ್ಲಾ ಭಾಗಗಳಿಗೂ ಸಮಾನ ಅನುದಾನ ನೀಡಬೇಕು. ಉತ್ತರಪ್ರದೇಶಕ್ಕೆ ನೀಡಬೇಡಿ ಎಂದು ಹೇಳುತ್ತಿಲ್ಲ. ಅವರೂ ಭಾರತೀಯರೇ. ಆದರೆ ಎಲ್ಲರಿಗೂ ಸಮಾನ ಹಣ ಸಂಚಿಕೆ ಮಾಡಬೇಕು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಇದರಲ್ಲಿ ಗ್ಯಾರಂಟಿಗಳು ಸೇರಿದಂತೆ ಅನೇಕ ವಿಚಾರಗಳನ್ನು ನಾವು ಸೇರಿಸಿದ್ದೆವು. ಇದೇ ರೀತಿ ಕಾಂಗ್ರೆಸ್ ಜನಪರವಾದ ಅನೇಕ ಕೆಲಸಗಳನ್ನು ಮಾಡಿದೆ. ರಾಹುಲ್ ಗಾಂಧಿ ಅವರನ್ನು ಕೇಂದ್ರ ಸಚಿವರೊಬ್ಬರು ನಿಮ್ಮು ಯಾವ ಜಾತಿ ಎಂದು ಪ್ರಶ್ನೆ ಮಾಡಿದ್ದರು. ಇವರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದರು. ಈಗ ಅವರ ಮಾತಿಗೆ ಬೆಲೆ ನೀಡುವಂತಾಗಿದೆ. 1931 ರಲ್ಲಿ ಜಾತಿ ಗಣತಿ ನಡೆದಿತ್ತು. ಈ ಹಿಂದೆ 2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜಾತಿಗಣತಿ ನಡೆಸಿತ್ತು. ಆದರೆ ಅಂಗೀಕರಿಸಲು ಆಗಿರಲಿಲ್ಲ.

ಉಳುವವನೆ ಭೂಮಿಯ ಒಡೆಯ ಎಂದು ಭೂಮಿ ನೀಡಿದ್ದು ನಾವು. ಬಂಗಾರಪ್ಪ ಅವರು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದರು. ಇದರಿಂದ ಲಕ್ಷಾಂತರ ರೈತರಿಗೆ ಉಪಯೋಗವಾಗಿದೆ. ಉಚಿತ ಕೊಡುಗೆಗಳಿಂದ ಸಾಕಷ್ಟು ಹೊಡೆತ ಎಂದು ಒಂದಷ್ಟು ಮಂದಿ ಹೇಳುತ್ತಾರೆ. ಆದರೆ ರೈತರಿಂದ ಎಷ್ಟು ಆದಾಯ ಬಂದಿದೆ ಎಂಬುದು ನಾವು ನೋಡಬೇಕು. ನಾವು ಮಾಡುವ ಕೆಲಸಗಳು ಪ್ರತಿಯೊಬ್ಬರಿಗೂ ಉಪಯೋಗವಾಗಬೇಕು. ಬೆವರ ಪರವಾಗಿ ನಮ್ಮ ಪಕ್ಷ ಎಂದಿಗೂ ಕೆಲಸ ಮಾಡುತ್ತದೆ.

ಗ್ಯಾರಂಟಿ ಯೋಜನೆಗಳ ಉಪಯೋಗವನ್ನು ಎಲ್ಲಾ ಪಕ್ಷಗಳ ಜನರೂ ತೆಗೆದುಕೊಂಡಿದ್ದಾರೆ. ನಾವು ಪಕ್ಷ ನೋಡಿ ಯೋಜನೆಗಳನ್ನು ನೀಡಿಲ್ಲ. ಜನರ ಏಳಿಗೆಯಾಗಬೇಕು ಎಂದು ನೀಡಿದ್ಧೇವೆ. ಶೀಘ್ರದಲ್ಲಿಯೇ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಮಾವೇಶವನ್ನು ರಾಜ್ಯದಲ್ಲಿ ಮಾಡಲಾಗುವುದು. ಇದರ ಬಗ್ಗೆ ರಾಷ್ಟೀಯ ಓಬಿಸಿ ಘಟಕದ ನೂತನ ಅಧ್ಯಕ್ಷರ ಬಳಿಯೂ ಮನವಿ ಮಾಡಿದ್ದೇವೆ.

ಜಾತಿ ಗಣತಿ ನಡೆಸಿ 10 ವರ್ಷಗಳಾಗಿವೆ ಎಂದು ವಿಪಕ್ಷಗಳು ತಕರಾರು ಎತ್ತಿವೆ. ಈ ನಡುವೆ ಅಧಿಕಾರದಲ್ಲಿ ಇದ್ದ ಬಿಜೆಪಿ ಏಕೆ ಇದರ ಬಗ್ಗೆ ಕಾಳಜಿ ತೋರಿಸಲಿಲ್ಲ.

ಜನಿವಾರ ಪ್ರಕರಣ ನನ್ನ ಜಿಲ್ಲೆಯಲ್ಲಿಯೂ ಆಯಿತು. ತಪಾಸಣೆ ವೇಳೆ ಜನಿವಾರ ಹಾಕಿಕೊಳ್ಳಬಹುದಾ ಎಂದು ಚರ್ಚೆ ನಡೆದಿದೆ. 10 ನಿಮಿಷಗಳ ನಂತರ ಆ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಬಿಜೆಪಿಯವರು ಕಾನೂನನ್ನೇ ಮಾಡಿಬಿಟ್ಟರಲ್ಲವೇ. ನಾವು ತಾಳಿ ಜನಿವಾರ ತೆಗೆಯಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಬಿಜೆಪಿಯವರು ಮಾಡಿದರು, ನಂತರ ತೆಗೆದರು. ಇಂತಹ ದ್ವಿಮುಖ ನೀತಿಯ ಬಗ್ಗೆ ಅವರು ಮಾತನಾಡ ಬೇಕಲ್ಲವೇ.

ನಾವು ಏಕೆ ದೇವರಿಗೆ ನಮಸ್ಕಾರ ಮಾಡುತ್ತೇವೆ ಎಂಬುದು ಗೊತ್ತಿಲ್ಲ. ನಮ್ಮ ತಂದೆ ತಾಯಿ ಮಾಡುತ್ತಿದ್ದರು ನಾವು ಅದನ್ನು ಅನುಸರಿಸಿಕೊಂಡು ಬಂದಿದ್ದೇವೆ. ಇದು ನಮ್ಮ ಪರಂಪರೆ. ಈ ಬಿಜೆಪಿಯವರು ಇಂತಹ ವಿಚಾರಗಳನ್ನು ಇಟ್ಟುಕೊಂಡು ಆಟವಾಡುತ್ತಾರೆ. ಮಾತೆತ್ತಿದರೆ ಪಾಕಿಸ್ತಾನ ತೋರಿಸುತ್ತಾರೆ.

ಬಿಜೆಪಿಯವರು ನಮ್ಮ ಎಲ್ಲಾ ಯೋಜನೆಗಳನ್ನು ಟೀಕೆ ಮಾಡಿದವರು ಈಗ ನಮ್ಮ ದಾರಿಗೆ ಬಂದಿದ್ದಾರೆ. ಗ್ಯಾರಂಟಿ ವಿರೋಧಿಸಿದರು, ಜಾತಿ ಗಣತಿ ವಿರೋಧಿಸಿದರು ಈಗ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯವರು ಗ್ಯಾರಂಟಿ ವಿರೋಧಿಸಿ ಈಗ ನಾವು ವಿರೋಧಿಸಿಲ್ಲ ಆದರೆ ಸರಿಯಾಗಿ ನೀಡಿ ಎಂದು ಹೇಳಿದ್ದೇವೆ ಎನ್ನುತ್ತಿದ್ದಾರೆ.

ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆ ಮೇಲೆ ಮೂರುವರೆ ಸಾವಿರ ಸಾಲ ಹೊರೆಸಿ ಹೋಗಿದ್ದರು. ಆರಂಭದಲ್ಲಿ ಇಲಾಖೆ ನಡೆಸಲು ಕಷ್ಟವಾಯಿತು. ಆದರೆ ಈ ಬಾರಿ ಮುಖ್ಯಮಂತ್ರಿಗಳು ನಾನು ಕೇಳಿದ್ದಕ್ಕಿಂತ ಹೆಚ್ಚು ಹಣ ನೀಡಿದ್ದಾರೆ.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು

ಭಾರತ್ ಜೋಡೋ ಸಮಯದಿಂದಲೂ ದೇಶದಲ್ಲಿ ಜಾತಿಗಣತಿ ನಡೆಯಬೇಕು ಎಂದು ರಾಹುಲ್ ಗಾಂಧಿ ಅವರು ಪ್ರತಿಪಾದನೆ ಮಾಡುತ್ತಾ ಬಂದಿದ್ದರು. ಈಗ ಅವರ ಮಾತಿಗೆ ಕೇಂದ್ರ ತಲೆಬಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೂ ಸಹ ಈ ಅಂಶವನ್ನು ಸೇರಿಸಿದ್ದೆವು. ನಮ್ಮ ಪಕ್ಷ ಹಾಗೂ ಸರ್ಕಾರದ ವತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.

ಕೆಪಿಸಿಸಿ ಎಸ್ ಇ ಘಟಕದ ಅಧ್ಯಕ್ಷರಾದ ಧರ್ಮಸೇನ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ, ಇಂಟೆಕ್ ಅಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್ವರ್, ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷರಾದ ವಿಜಯ್ ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ