ಕೆಲ ಸಮಯದ ಹಿಂದೆ ರುಂಡ ಇಲ್ಲದ ನಿಂಗಮ್ಮ ಎಂಬಾಕೆಯ ಶವ ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾಗಿದ್ದು, ಯಾರೋ ತಳ್ಳಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಬಿಎಂಟಿಸಿ ಕಂಡಕ್ಟರ್ ಬಾಲಚಂದ್ರ ಬಂಧಿತ ಆರೋಪಿಯಾಗಿದ್ದು, ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ನಿಂಗಮ್ಮ ಮೊದಲ ಮಗನ ಪತ್ನಿ ಲತಾ ಪರಾರಿಯಾಗಿದ್ದಾಳೆ.
ಪತಿ ಮರಣದ ಬಳಿಕ ಒಂಟಿಯಾಗಿದ್ದ ಆರೋಪಿತೆ ಲತಾ ಹಾಗೂ ಬಿಎಂಟಿಸಿ ಕಂಡಕ್ಟರ್ ಬಾಲಕೃಷ್ಣ ನಡುವೆ ಸಂಬಂಧ ಹೊಂದಿದ್ದು, ಇದನ್ನು ಅತ್ತೆಯಾದ ನಿಂಗಮ್ಮ ಬಹಿರಂಗವಾಗಿ ಹೇಳಿಕೊಂಡು ತಿರುಗುತ್ತಿದ್ದಳು. ಅಲ್ಲದೇ ತನ್ನಿಂದ ಪಡೆದಿದ್ದ 1.50 ಲಕ್ಷ ರೂ. ವಾಪಸ್ ಕೊಡದೇ ಸತಾಯಿಸುತ್ತಿದ್ದಾಳೆ ಎಂದು ಆರೋಪಿಸುತ್ತಿದ್ದಳು.
ತಮ್ಮ ಅನೈತಿಕ ಸಂಬಂಧ ಹೊರಗೆ ಬಾರದಿರಲು ಹಾಗೂ ಹಣ ಟಾರ್ಚರ್ ತಪ್ಪಿಸಿಕೊಳ್ಳಲು ನಿಂಗಮ್ಮಳನ್ನು ಕೊಲ್ಲಲು ಇಬ್ಬರೂ ನಿರ್ಧರಿಸಿದ್ದರು. ಹೀಗಾಗಿ ಹಣ ನೀಡುವ ನೆಪದಲ್ಲಿ ನಿಂಗಮ್ಮಳನ್ನ ಮನೆಗೆ ಕರೆಸಿಕೊಂಡ ಬಿಎಂಟಿಸಿ ಕಂಡಕ್ಟರ್ ಬಾಲಚಂದ್ರ ಕುತ್ತಿಗೆ ಬಿಗಿದು ಕೊಲೆ ಮಾಡಿ ರೈಲ್ವೇ ಟ್ರ್ಯಾಕ್ ಗೆ ಹಾಕಿದ್ದರು.
ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಛಿದ್ರವಾದ ದೇಹದಿಂದ ರುಂಡ ಮಾತ್ರ ಸಂಗ್ರಹಿಸಿ ಕವರ್ ನಲ್ಲಿ ಇಟ್ಟು ಟೋಲ್ ಬಳಿ ನಿಂತಿದ್ದ ಲಾರಿಯಲ್ಲಿ ಹಾಕಿದ್ದರು. ಶವವನ್ನು ರೈಲ್ವೆ ಟ್ರ್ಯಾಕ್ ಹಾಕುವ ಮೊದಲು ಮೃತ ದೇಹದ ಮೇಲಿದ್ದ ಚಿನ್ನಾಭರಣವನ್ನೂ ಕೂಡ ದೋಚಿದ್ದರು.
ಸೊಸೆ ಮನೆಗೆ ಹೋದ ತಾಯಿ ಬಂದಿಲ್ಲ ಎಂದು ಮೊದಲು ಮಂಡ್ಯದಲ್ಲಿ ಪುತ್ರ ಸತೀಶ್ ದೂರು ನೀಡಿದ್ದರು. ನಂತರ ತುಮಕೂರು ಶವಾಗಾರದಲ್ಲಿದ್ದ ತಾಯಿಯ ಗುರುತು ಪತ್ತೆ ಹಚ್ಚಿದ್ದರು. ನಂತರ ದೂರು ದಾಖಲಿಸಿ ತನಿಖೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಮೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗ್ರಾಮಾಂತರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿತ್ತು.