ರಕ್ಷಾ ಬಂಧನ: ಅಣ್ಣ-ತಂಗಿಯರ ಈ ಬಂಧ….ಮರೆಯಲಾಗದ ಅನುಬಂಧ

ಶುಕ್ರವಾರ, 24 ಆಗಸ್ಟ್ 2018 (15:35 IST)
-ಸತೀಶ್ ಕುಮಾರ್

ಪ್ರತಿ ವರ್ಷ ರಕ್ಷಾ ಬಂಧನ ಬಂದಾಗ ನನ್ನ ಕಣ್ಮುಂದೆ ಬರುವುದು ನನ್ನ ಪುಟ್ಟ ಸಹೋದರಿ. ಅಮ್ಮನ ತೋಳಿನಲ್ಲಿ ನಲಿಯುತ್ತ, ತನ್ನ ನಗುವಿನ ಮೂಲಕವೇ ಮನೆ ಮಂದಿಯನ್ನೆಲ್ಲಾ ಸೆಳೆಯುತ್ತಿದ್ದ ಪುಟ್ಟ ರಾಜಕುಮಾರಿಯ ಹಾಗೇ ಇದ್ದ ತಂಗಿಯವಳು. ಒಬ್ಬ ಹುಡುಗನಿಗೆ ನಿಜವಾದ ಉಡುಗೊರೆ ಎಂದರೆ ಅದು ಅವನ ಸಹೋದರಿ ಹುಟ್ಟಿದ ದಿನ. 
ಈ ಬೆಲೆಕಟ್ಟಲಾಗದ ಉಡುಗೊರೆಯನ್ನು ಅಣ್ಣನಾದವನು ತನ್ನ ಜೀವನ ಪರ್ಯಂತ ಜತನವಾಗಿ ಇಟ್ಟುಕೊಳ್ಳುತ್ತಾನೆ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಮನೆತುಂಬಾ ಓಡಾಡುವ ಸಹೋದರಿಗೆ ತುಂಬಾ ಚೆನ್ನಾಗಿ ಕಾಣಬೇಕು ಎಂಬುದು ಅಣ್ಣನ ಆಸೆ ಆಗಿರುತ್ತದೆ. ತನಗೆ ತಿಳಿಯದೇ ತಂಗಿಯ ಜವಾಬ್ದಾರಿಯನ್ನು ಅಣ್ಣನಾದವನು ಹೆಗಲಿಗೇರಿಸಿಕೊಂಡು ಬಿಟ್ಟಿರುತ್ತಾನೆ.. ಇನ್ನು ತಂಗಿಗಾಗಿ ಏನದಾರೂ ಕೊಳ್ಳುವಾಗಲೂ ಸಾಕಷ್ಟು ಯೋಚನೆ ಮಾಡುತ್ತೇವೆ. ಇದು ನನ್ನ ತಂಗಿಗೆ ಚೆನ್ನಾಗಿ ಕಾಣುತ್ತಾ, ಇದು ಅವಳಿಗೆ ಇಷ್ಟವಾಗಬಹುದಾ ಎಂಬಿತ್ಯಾದಿ ಆಯ್ಕೆಗಳು ನಮ್ಮ ಕಣ್ಮುಂದೆ ಬರುತ್ತದೆ. 
 
ಇನ್ನು ಎಲ್ಲಾದರೂ ಪ್ರವಾಸಕ್ಕೆ ಹೋದರೆ ಆಕೆಯನ್ನು ಸಂತೋಷ ಪಡಿಸುವುದಕ್ಕಾಗಿ ಇದ್ದ ಹಣದಲ್ಲಿಯೇ ತಂಗಿಗಾಗಿ ಏನಾದರೂ ಉಡುಗೊರೆ ಖರೀದಿಸುವುದಕ್ಕೆ ಮನಸ್ಸು ಕಾತರಿಸುತ್ತದೆ. ನನ್ನ ಪುಟ್ಟ ತಂಗಿಯನ್ನು ಶಾಲೆಗೆ ಕರೆದೊಯ್ಯುವ ಆ ಕ್ಷಣವನ್ನು ನೆನಪಿಸಿಕೊಂಡರೇ ಈಗಲೂ ಅದೊಂದು ಅವರ್ಣಿಯ ಖುಷಿ ನೀಡುತ್ತದೆ. ಅವಳನ್ನು ಶಾಲೆಗೆ ಬಿಟ್ಟ ನಂತರ ಮನದಲ್ಲಿ ಏನೋ ಒಂದು ಭಯ. ಅವಳು ಹೇಗೆ ಇರುತ್ತಾಳೆ ಅಲ್ಲಿ ತನಗೆ ಗೊತ್ತೇ ಇಲ್ಲದವರ ಜತೆ ನನ್ನ ತಂಗಿ ಹೇಗಿರಬಹುದು ಹೀಗೆ ಏನೇನೋ ಹುಚ್ಚು ಯೋಚನೆಗಳು ತಲೆಯಲ್ಲಿ ಸುಳಿಯುತ್ತವೆ. ಶಾಲೆಯಿಂದ ವಾಪಾಸ್ಸು ಕರೆದುಕೊಂಡು ಬರುವಾಗ ಅವಳು ಕೇಳುವ ಎಲ್ಲಾ ಪ್ರಶ್ನೆಗೂ ಉತ್ತರಿಸುವ ಬಯಕೆ ನನ್ನದು. ನನ್ನದೊಂದು ಪುಟ್ಟ ಸೈಕಲಿನಲ್ಲಿ ಅವಳಿಗಾಗಿ ಮಧ್ಯಾಹ್ನದ ಊಟ ಕೊಂಡೊಯ್ಯುತ್ತಿದ್ದೆ. ಅವಳು ತಿನ್ನುವುದನ್ನೇ ನೋಡುತ್ತಾ ಖುಷಿ ಪಡುತ್ತಿದ್ದ ದಿನಗಳವು. ಅವಳಿಗಾಗಿ ಟೂತ್ ಪಿಕ್ ಸಹ ಕೊಂಡೊಯ್ಯುತ್ತಿದ್ದೆ. ತಂಗಿಯ ಒಂದು ಪುಟ್ಟ ನಗುವಿಗಾಗಿ ಏನೆಲ್ಲಾ ಸರ್ಕಸ್ಸು ಮಾಡುತ್ತಿದ್ದೆ.
 
ಇನ್ನು ತಂಗಿಯ ಹುಟ್ಟುಹಬ್ಬ ವೆಂದರೆ ಮನೆಯಲ್ಲಿ ಅದೊಂದು ರೀತಿಯ ಹಬ್ಬದ ಸಂಭ್ರಮ. ಅವಳಿಗಾಗಿ ಏನು ಉಡುಗೊರೆ ಕೊಡುವುದು ಎಂಬ ಯೋಚನೆ. ಟೆಡ್ಡಿ ಬೇರ್, ಚಾಕೋಲೇಟ್, ಹೂವು ಇವುಗಳು ಹುಡುಗಿಯರು ತುಂಬಾ ಇಷ್ಟಪಡುವ ಉಡುಗೊರೆಯಾಗಿರುತ್ತದೆ. ನನ್ನ ತಂಗಿಗೆ ಹೂವೆಂದರೆ ತುಂಬಾ ಇಷ್ಟವಿದ್ದಿತ್ತು.  ಅವಳ ಆಸೆ ಈಡೇರಿಸುವುದಕ್ಕಾಗಿ ಪಕ್ಕದ ಮನೆಯ ಗೋಡೆ ಜಿಗಿದು ಸದ್ದಿಲ್ಲದೇ, ಹೂ ತರುತ್ತಿದ್ದೇವು.
 
ಅಣ್ಣನಾದವನು ಸಹೋದರಿಯೆಡಗಿನ ತನ್ನ ಪ್ರೀತಿಯನ್ನು ಎಲ್ಲರ ಎದುರು ತೋರಿಸದೇ ಇರಬಹುದು. ಆದರೆ ಅವನ ಮನಸ್ಸಿನೊಳಗೆ ತಂಗಿಯೆಡಗಿನ ಒಂದು ಪ್ರೀತಿ, ಕಾಳಜಿ, ಜವಾಬ್ದಾರಿ ಸದಾ ಜಾಗೃತವಾಗಿರುತ್ತದೆ.
 
ಇನ್ನು ಸಹೋದರಿ ಮೈನೆರೆದಳೆಂದರೆ ಅಣ್ಣನ ಜವಾಬ್ದಾರಿ ಮತ್ತಷ್ಟೂ ಹೆಚ್ಚು. ಮೊದಲ ಬಾರಿ ರೇಷ್ಮೆ ಸೀರೆ ಉಟ್ಟು, ಹೂವು ಮುಡಿದ ನವ ವಧುವಿನಂತೆ ಅಲಂಕಾರವಾಗಿ ಕುಳಿತ ತಂಗಿಯನ್ನು ನೋಡುವಾಗ ಹೆಮ್ಮೆ ಅನಿಸುತ್ತದೆ. ಪುಟ್ಟ ತಂಗಿ ಇವಾಗ ಬೆಳೆದು ದೊಡ್ಡವಳಾಗಿದ್ದಾಳೆ ಅವಳ ರಕ್ಷಣೆಯ ಹೊಣೆ ನನ್ನ ಮೇಲಿದೆ ಎಂಬ ಭಾವನೆ ಅಣ್ಣನಲ್ಲಿ ಮೂಡುತ್ತದೆ.  ಅವಳ ಬಾಡಿಗಾರ್ಡ್ ಆಗಿಯೇ ಬಿಡುತ್ತಾನೆ. 
 
ಇನ್ನು ಕಾಲೇಜಿಗೆ ಹೊರಟ ತಂಗಿಯನ್ನು  ಮೋಟಾರು ಬೈಕ್ ನಲ್ಲಿ ಕೊಡಯ್ಯೊದು ಬಿಡುವಾಗ ಅಣ್ಣನಾದವನಿಗೆ ತುಂಬಾ ಸಂತೋಷ ಕೊಡುವ ವಿಷಯ. ಹಾಗೇ ತಂಗಿಗೂ ಕೂಡ ತಾನು ಅಣ್ಣನ ರಕ್ಷಣೆಯಲ್ಲಿದ್ದೇನೆ ಎಂಬ ಹೆಮ್ಮೆಯ  ಭಾವ. ತಂಗಿಯ ರಕ್ಷಣೆ ಮಾಡುವುದು ಅಣ್ಣನಿಗೆ ಸಂತೋಷ ಕೊಡುವ ವಿಷಯವಾಗಿರುತ್ತದೆ.
 
ಇವೆಲ್ಲಕ್ಕಿಂತ ಹೆಚ್ಚಾಗಿ ತಂಗಿಯ ಮದುವೆ ವಿಚಾರ ಬಂದಾಗ ಅಣ್ಣನಾದವನು ನಿಜವಾದ ಜವಾಬ್ದಾರಿಗೆ ಹೆಗಲಾಗುತ್ತಾನೆ. ಅವನಿಗೆ ತನ್ನ ತಂಗಿಯ ಭವಿಷ್ಯವೊಂದೆ ಕಣ್ಮುಂದೆ ಇರುತ್ತದೆ. ತಂಗಿಗಾಗಿ ಒಂದೊಳ್ಳೆ ಗಂಡನನ್ನು ಹುಡುಕುವ ಜವಾಬ್ದಾರಿಯನ್ನು ಅಣ್ಣ ಹೊತ್ತುಕೊಳ್ಳುತ್ತಾನೆ. ಅದರಲ್ಲೂ ಹಿರಿ ಮಗನಾದರೆ, ನಿವೃತ್ತ ತಂದೆ, ಇಡೀ ಕುಟುಂಬವೇ ಅವನ ಮೇಲೆ ಅವಲಂಬಿತರಾಗಿರುತ್ತದೆ. ತಂಗಿಯ ಮದುವೆಗಾಗಿ ಹಣಕೂಡಿಡುವುದಕ್ಕೆ ಶುರು ಮಾಡುತ್ತಾನೆ. 
 
ಅವಳ ಮದುವೆಗಾಗಿ ತನ್ನ ವೈಯಕ್ತಿಕ ಖರ್ಚುಗಳನ್ನು ಕಡಿಮೆ ಮಾಡುವುದಲ್ಲದೇ, ಕೆಲವೊಮ್ಮೆ ಬೆಳಿಗ್ಗಿನ ತಂಡಿ ಸಹ ತಿನ್ನದೇ ಅದರಲ್ಲೂ ದುಡ್ಡನ್ನು ಉಳಿಸುವುದಕ್ಕೆ ನೋಡುತ್ತೇವೆ.  ಮದುವೆಯ ತಯಾರಿ ಬಗ್ಗೆ ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಯೋಚಿಸುತ್ತಾ ನಿದ್ದೆಯನ್ನು ಮರೆಯುತ್ತೇವೆ. 
ಇನ್ನೇನು ಮದುವೆ ಮಾಡಿಕೊಟ್ಟಾಯಿತು ಎಂದು ಸಮಾಧಾನದ ಉಸಿರು ಬಿಡುವಾಗಲೇ ಅರೆ ನನ್ನ ತಂಗಿ ಅಪರಿಚಿತರ ಮನೆಯಲ್ಲಿ ಹೇಗೆ ಇರುತ್ತಾಳೆ ಎಂಬ ಭಾವವೊಂದು ಇಡೀ ಮನಸ್ಸನ್ನು ಅಲ್ಲಾಡಿಸಿಬಿಡುತ್ತದೆ. ಅವಳ ಅಗತ್ಯಗಳನ್ನು ಯಾರು ನೋಡಿಕೊಳ್ಳುತ್ತಾರೆ, ಆ ಮನೆಯಲ್ಲಿ ಅವಳು ಹೇಗೆ ಇರಬಹುದು ಅವಳ ಪುಟ್ಟ ಪುಟ್ಟ ಆಸೆಗಳನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ ಹೀಗೆ ಅನೇಕ ಯೋಚನೆಗಳು ಮೂಡುತ್ತದೆ. ತಂಗಿಯ ಮದುವೆಯ ನಂತರ ಒಂದು ಜವಾಬ್ದಾರಿ ಸಂಪೂರ್ಣಗೊಳಿಸಿದ ಖುಷಿ ಸಿಕ್ಕರೂ ಆ ಅಗಲುವಿಕೆಯು ಸಾಕಷ್ಟು ನೋವನ್ನುಂಟು ಮಾಡುತ್ತದೆ. ತಂಗಿಯ ಜತೆ ಕಳೆದ ಪ್ರತಿಯೊಂದು ಕ್ಷಣವೂ ನೆನಪಾಗಿ ಕಣ್ಣೀರಾಗಿ ಹರಿಯುತ್ತದೆ.
 
ಮದುವೆಯ ನಂತರ ನಮ್ಮ ಪುಟ್ಟ ತಂಗಿ ಅವಳದೇ ಸಂಸಾರದ ರಥಕ್ಕೆ ಸಾರಥಿಯಾಗುತ್ತಾಳೆ. ಹೆಂಡತಿಯಾಗಿ, ತಾಯಿಯಾಗಿ ಒಂದು ಮನೆಯ , ಕುಟುಂಬದ ಜಬವಾಬ್ದಾರಿ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಾಳೆ, ಅದನ್ನು ನೋಡುವುದೇ ಅಣ್ಣನಿಗೆ ಖುಷಿ ನೀಡುವ ಸಂಗತಿ.
 
ಹಾಗಾಗಿ ಅಣ್ಣ-ತಂಗಿಯರ ಈ ಅನುಬಂಧ ಬಿಡಿಸಲಾಗದ ನಂಟು ಎಂದರೆ ಸುಳ್ಳಲ್ಲ. ಅಣ್ಣನ ಮನಸ್ಸಿನಲ್ಲಿ ತಂಗಿಗಾಗಿ ಪ್ರೀತಿಯ ಒರತೆಯೊಂದು ಸದಾ ಕಾಲ ಹರಿಯುತ್ತಲೇ ಇರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ