ಮಂಗಳೂರು: ಕೊನೆಗೂ ಮೊನ್ನೆಯಷ್ಟೇ ಸಾವಿಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಭೇಟಿ ನೀಡಿದ್ದಾರೆ.
ವಿಪಕ್ಷಗಳು ಈ ಪ್ರಕರಣಕ್ಕೆ ರಮಾನಾಥ್ ರೈ ನೇರ ಹೊಣೆ ಎಂದು ಆರೋಪಿಸಿದ್ದರು. ಅಲ್ಲದೆ, ಸಚಿವರಾಗಲಿ, ಸಿಎಂ ಸಿದ್ದರಾಮಯ್ಯ ಆಗಲಿ, ಸಾಂತ್ವನ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದರ ಬೆನ್ನಲ್ಲೇ ಸಚಿ ರಮಾನಾಥ್ ರೈ ಶರತ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಸಂಪೂರ್ಣವಾಗಿ ದೂರವಿಟ್ಟಿದ್ದ ಸಚಿವರು, ರಹಸ್ಯವಾಗಿ ಕುಟುಂಬದವರನ್ನು ಭೇಟಿಯಾಗಿರುವುದು ಅಚ್ಚರಿಗೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಮಗನನ್ನು ನೆನೆದು ಶರತ್ ತಂದೆ ತನಿಯಪ್ಪ ಕಣ್ಣೀರು ಹಾಕಿದರು ಎನ್ನಲಾಗಿದೆ. ಅಲ್ಲದೆ, ತನ್ನ ಮಗನ ಸಾವಿನ ಬಗ್ಗೆ ಸರಿಯಾದ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡಿ ಎಂದು ಒತ್ತಾಯಿಸಿದರು ಎನ್ನಲಾಗಿದೆ. ಇದೇ ವೇಳೆ ದ.ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಮಾಲೋಚನೆ ಸಭೆ ನಡೆದಿದೆ. ಅಲ್ಲದೆ, ಅಪರಾಧಿಗಳ ಪತ್ತೆಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.