ರಸ್ತೆ ಬದಿ ಮೂತ್ರ ವಿಸರ್ಜಿಸಿದ ಸಿಬ್ಬಂದಿಯಿಂದ ರಾಮೇಶ್ವರಂ ಕೆಫೆಗೆ ಸಂಕಷ್ಟ

Krishnaveni K

ಮಂಗಳವಾರ, 16 ಏಪ್ರಿಲ್ 2024 (11:06 IST)
ಬೆಂಗಳೂರು: ಇತ್ತೀಚೆಗೆ ಬಾಂಬ್ ಸ್ಪೋಟದಿಂದಾಗಿ ಸುದ್ದಿಯಾಗಿದ್ದ ರಾಮೇಶ‍್ವರಂ ಕೆಫೆ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ಈ ಬಾರಿ ಸಿಬ್ಬಂದಿಯೊಬ್ಬರು ರಸ್ತೆ ಬದಿ ಮೂತ್ರ ವಿಸರ್ಜಿಸಿದ್ದಕ್ಕೆ ರಾಮೇಶ್ವರಂ ಕೆಫೆಗೆ ಸಂಕಷ್ಟ ಎದುರಾಗಿದೆ.

ಕೆಲವು ದಿನಗಳ ಹಿಂದೆ ಬಾಂಬ್ ಸ್ಪೋಟವಾದ ಬಳಿಕ ರಾಮೇಶ್ವರಂ ಕೆಫೆ ದೇಶದಾದ್ಯಂತ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಈ ಪ್ರತಿಷ್ಠಿತ ರೆಸ್ಟೋರೆಂಟ್ ರಿ ಓಪನ್ ಆಗಿತ್ತು. ಇದಾದ ಬಳಿಕ ಜನರ ಸಂಖ್ಯೆಯೂ ಹೆಚ್ಚಾಗಿತ್ತು. ಬೆಂಗಳೂರಿನ ಐಟಿ-ಬಿಟಿ ಪ್ರತಿಷ್ಠಿತ ಏರಿಯಾ ವೈಟ್ ಫೀಲ್ಡ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ಇದಾಗಿದೆ.

ಆದರೆ ಇದೀಗ ರಾಮೇಶ್ವರಂ ಕೆಫೆಯ ಸಿಬ್ಬಂದಿಯೊಬ್ಬರು ಕೆಫೆ ಪಕ್ಕದ ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋವನ್ನು ಎಕ್ಸ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದರು. ಜೊತೆಗೆ ನಿಮ್ಮ ಸಿಬ್ಬಂದಿಗೆ ರೆಸ್ಟೋರೆಂಟ್ ನಲ್ಲಿಯೇ ಶೌಚಾಲಯ ವ್ಯವಸ್ಥೆ ಮಾಡಿಕೊಟ್ಟಿಲ್ಲವೇ? ಮೂತ್ರ ವಿಸರ್ಜಿಸಿದ ಬಳಿಕ ಇವರು ಕೈಗಳನ್ನು ಸರಿಯಾಗಿ ತೊಳೆಯುತ್ತಾರೆಯೇ’ ಎಂದು ಬಿಬಿಎಂಪಿ ಮತ್ತು ಕೆಫೆ ಖಾತೆ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದರು.

ಅವರ ಈ ವಿಡಿಯೋ ಬಿಬಿಎಂಪಿ ಗಮನಕ್ಕೆ ಬಂದಿದೆ. ಇದೀಗ ಈ ಬಗ್ಗೆ ರಾಮೇಶ್ವರಂ ಕೆಫೆ ಆಡಳಿತ ಮಂಡಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಸಿಬ್ಬಂದಿಗೆ ರೆಸ್ಟ್ ರೂಂ ಒದಗಿಸಿಲ್ಲವೇ? ಒದಗಿಸಿದ್ದರೂ ಸಿಬ್ಬಂದಿ ಈ ರೀತಿಯ ವರ್ತನೆ ಬಗ್ಗೆ ವಿವರಣೆ ಒದಗಿಸಬೇಕು ಎಂದು ಆದೇಶಿಸಿದೆ.

ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ  ಬಾಂಬ್ ಸ್ಪೋಟವಾಗಿತ್ತು. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದರು. ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಮೊನ್ನೆಯಷ್ಟೇ ಎನ್ ಐಎ ಅಧಿಕಾರಿಗಳು ಆರೋಪಿಗಳನ್ನು ಪಶ್ಚಿಮ ಬಂಗಾಲದಲ್ಲಿ ಸೆರೆ ಹಿಡಿದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ