ಬಳ್ಳಾರಿಯಲ್ಲಿ ಇಂದು ಭಾರತ್ ಜೋಡೋ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆ ಬಳಿಕ ಸಮಾವೇಶ ನಡೆಯಲಿದೆ. ಈ ಬೆನ್ನಲ್ಲೆ ಜೋಡೋ ಪಾದಯಾತ್ರೆ ಬಗ್ಗೆ ಸಚಿವ ಶ್ರೀರಾಮುಲು ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್ನ ತೋಡೋ ಯಾತ್ರೆಗೆ ಸುಸ್ವಾಗತ ಕೋರಿ ವ್ಯಂಗ್ಯವಾಡಿದ್ದಾರೆ. 1999 ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲಬಹುದು ಎಂಬ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ತೋಡೋ ಯಾತ್ರೆಗೆ ಹಾರ್ದಿಕ ಸುಸ್ವಾಗತ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆದ್ದು, ಸೌಜನ್ಯಕ್ಕಾದರೂ ಜನತೆಗೆ ಧನ್ಯವಾದಗಳನ್ನು ತಿಳಿಸದೇ, ದೆಹಲಿಯಿಂದಲೇ ರಾಜೀನಾಮೆ ಪತ್ರ ಬಿಸಾಕಿದ ಖಾಯಂ ಎಐಸಿಸಿ AICC ಅಧ್ಯಕ್ಷರ ಮುದ್ದಿನ ಪುತ್ರ ಪಾದಯಾತ್ರೆಯ ಮೂಲಕ ಬಳ್ಳಾರಿಗೆ ಆಗಮಿಸುತ್ತಿರುವುದಕ್ಕೆ ನಿಮಗಿದೋ ಭವ್ಯ ಸ್ವಾಗತ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಏದುಸಿರು ಬಿಡುತ್ತಾ ಕೈಲಾಗದಿದ್ದರೂ ಎದ್ದೋ ಬಿದ್ದವನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು- ಮುಂಗುಸಿಯಂತೆ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕ್ಯಾಮರಾ ಮುಂದೆ ಪೋಸು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ. ಬಳ್ಳಾರಿ ಜಿಲ್ಲೆ ಅಭಿವೃದ್ದಿಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆಯೇ ದೊಡ್ಡದು. ಅದು ಜಿಲ್ಲೆಯ ಜನರಿಗೂ ಗೊತ್ತಿದೆ. ಹಾಗಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಬಂದು ಏನೇ ಮಾಡಿದರೂ ನಂಬುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.