ಹಾಸನ: ಸಂವಿಧಾನ ಎಂದರೇನು? ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಯಾಕೆ ಜಾರಿಗೆ ತಂದಿದೆ ಎಂದು ಪ್ರತಿಯೊಬ್ಬರನ್ನು ಪ್ರಶ್ನೆ ಮಾಡಬೇಕಾಗಿದೆ. ದೇಶದ ಬಡವರು, ರೈತರು, ಹಿಂದುಳಿದವರು, ಪರಿಷಶಿಷ್ಟರು, ಅಲ್ಪಸಂಖ್ಯಾತರಿಗೆ ಸಮಾನವಾಗಿ ಅಧಿಕಾರ ಹಾಗೂ ಗೌರವ ಸಿಗುವಂತೆ ಮಾಡಲು ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ಜಾರಿಗೆ ತರಲಾಯಿತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಅವರು ಇಂದು ಹಾಸನದಲ್ಲಿ ನಡೆದ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ಬಡವರು, ರೈತರು, ಪರಿಶಿಷ್ಟರು, ಶೋಷಿತರು, ಮಹಿಳೆಯರು, ಯುವಕರು, ಕಾರ್ಮಿಕರು, ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದೆ. ಬಿಜೆಪಿ ಸರ್ಕಾರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ವಿರುದ್ಧ ಯಾಕೆ ದಾಳಿ ಮಾಡುತ್ತದೆ ಎಂದು ಗೊತ್ತಿದೆಯಾ? ಕಾರಣ, ಇವರೆಲ್ಲರೂ ಬಡವರು, ದಲಿತರು, ಮಹಿಳೆಯರು, ಯುವಕರು, ರೈತರು, ಅಲ್ಪಸಂಖ್ಯಾತರ ಪರವಾಗಿ ಹೋರಾಟ ಮಾಡುತ್ತಾರೆ. ಈ ಕಾರಣಕ್ಕೆ ಬಿಜೆಪಿ ಇವರ ಮೇಲೆ ದಾಳಿ ಮಾಡುತ್ತಿದೆ ಎಂದು ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅವರು ಕೇವಲ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಮೇಲೆ ಮಾತ್ರ ದಾಳಿ ಮಾಡುತ್ತಿಲ್ಲ. ಕರ್ನಾಟಕದ ಬಡವರು, ಕಾರ್ಮಿಕರು, ರೈತರು, ಪರಿಶಿಷ್ಟರ ಮೇಲೆ ದಾಳಿ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ಹೀಗಾಗಿ ಬಿಜೆಪಿ ಸರ್ಕಾರದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಮೇಲೆ ಟೀಕೆ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ರಾಜ್ಯದ ಮಹಿಳೆಯರಿಗೆ ಸಿಗುವ ಎರಡು ಸಾವಿರ, ಅನ್ನಭಾಗ್ಯ ಯೋಜನೆ ಅಕ್ಕಿ ಹಣ, 200 ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರ ನಿರುದ್ಯೋಗ ಭತ್ಯೆಯನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಇರುವವರೆಗೂ ನಿಮ್ಮ ಗ್ಯಾರಂಟಿ ಯೋಜನಗಳನ್ನು ಕಸಿಯುವಂತ ಮಗ ಹುಟ್ಟುವುದಿಲ್ಲ. ನಾವು ಸಂವಿಧಾನದ ರಕ್ಷಣೆ ಮಾಡಿ, ರಾಜ್ಯದ ದಲಿತರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ರಕ್ಷಣೆಯನ್ನು ಮಾಡುತ್ತೇವೆ ಎಂದು ಸುರ್ಜೇವಾಲಾ ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನೀವು ಶ್ರೀಮಂತ ಕಂಪನಿಗಳು ತೆರಿಗೆಯನ್ನು 33%ನಿಂದ 24% ಕಡಿತಗೊಳಿಸಿ ಅವರ ಜೇಬಿಗೆ 3 ಲಕ್ಷ ಕೋಟಿ ರೂಪಾಯಿ ಹಾಕಿದ್ದೀರಿ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂವಿಧಾನದ ವ್ಯಾಪ್ತಿಯಲ್ಲಿ ರಾಜ್ಯದ ಜನರ ಜೇಬಿಗೆ 56 ಸಾವಿರ ಕೋಟಿಯನ್ನು ಹಾಕಿದರೆ ನಿಮ್ಮ ಹೊಟ್ಟೆಗೆ ಬೆಂಕಿ ಯಾಕೆ ಬೀಳುತ್ತದೆ? ಕೇಂದ್ರ ಸರ್ಕಾರ ದೊಡ್ಡ ಕೈಗಾರಿಕೆ ಮಾಲೀಕರ 17 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರೆ, ನಮ್ಮ ಸರ್ಕಾರ ಜನರ ಜೇಬಿಗೆ ಹಣ ಹಾಕಿದರೆ ಯಾಕೆ ಅಸೂಯೆಪಡುತ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ.