ಬೆಂಗಳೂರು: ಅನುದಾನ ಸರಿಯಾಗಿ ಬಳಕೆ ಮಾಡಿಲ್ಲ, ಅಭಿವೃದ್ಧಿಯೂ ಆಗಿಲ್ಲ. ಹಾಗಿದ್ದರೂ ಆರ್ ಎಸ್ಎಸ್ ಜಪ ಮಾಡುತ್ತಾ ಕೂತಿದ್ದಾರೆ. ಇದುವೇ ಸರ್ಕಾರದ ಸಾಧನೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಆರು ತಿಂಗಳಲ್ಲಿ ಶೇ.30 ರಷ್ಟು ಮಾತ್ರ ಫಂಡ್ ಬಳಕೆಯಾಗಿದೆ. ಅನುದಾನ ಬಳಕೆಯೂ ಕಡಿಮೆ, ಅಭಿವೃದ್ಧಿಯೂ ಕಡಿಮೆ ಎಂದು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಅವರು ಸರ್ಕಾರದಲ್ಲಿ ಹೇಗೆ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ.
ಅದರಲ್ಲೂ RSS ಜಪ, ವಿವಾದಾತ್ಮಕ ಹೇಳಿಕೆಗಳಲ್ಲೇ ಕಾಲಹರಣ ಮಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಗಳ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ಆರ್ ಡಿಪಿಆರ್ ಇಲಾಖೆಯಲ್ಲಿ ಕೇವಲ ಶೇ.11.02% ಐಟಿ-ಬಿಟಿ ಇಲಾಖೆಯಲ್ಲಿ ಕೇವಲ ಶೇ.10.86% ಅನುದಾನ ಬಳಕೆಯಾಗಿರುವುದು ಅವರ ಇತ್ತೀಚಿನ "ರೋಷವೇಶ"ಕ್ಕೆ ಕಾರಣ ಏನು, ಆದರೆ ಹಿಂದಿರುವ ದುರುದ್ದೇಶ ಎನ್ನುವುದನ್ನ ಎತ್ತಿ ತೋರಿಸುತ್ತದೆ.
ಸಿಎಂ ಸಿದ್ದರಾಮಯ್ಯನವರೇ, ತಮ್ಮ ಉತ್ತರಾಧಿಕಾರಿ ಯಾರು? ಅಹಿಂದ ಚಳವಳಿ ಮುನ್ನಡೆಸುವವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮುನ್ನ, ಬಜೆಟ್ ನಲ್ಲಿ ಘೋಷಣೆಯಾದ ಅನುದಾನವನ್ನ ಬಿಡುಗಡೆ ಮಾಡುವುದು ಯಾವಾಗ? ಅದನ್ನ ಜನಕಲ್ಯಾಣಕ್ಕೆ, ಅಭಿವೃದ್ಧಿಗೆ ಖರ್ಚು ಮಾಡುವುದು ಯಾವಾಗ? ಎನ್ನುವ ಪ್ರಶ್ನೆಗಳನ್ನ ತಮಗೆ ತಾವೇ ಕೇಳಿಕೊಳ್ಳಿ ಸ್ವಾಮಿ. ನಿಮ್ಮಂತಹ ಅಸಮರ್ಥ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗಿರುವುದೇ ಕನ್ನಡ ನಾಡಿನ ದೊಡ್ಡ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.