ಬೆಂಗಳೂರು: ಚಿಕ್ಕಮಗಳೂರು, ಕೋಲಾರ ಸೇರಿದಂತೆ ಹಲವೆಡೆ ಪ್ಯಾಲೆಸ್ತೇನಿ ಧ್ವಜ ಹಿಡಿದು ಓಡಾಟ ಮಾಡಿದರಲ್ಲಿ ತಪ್ಪೇನಿದೆ ಎಂದು ಸಚಿವ ಜಮೀರ್ ಅಹ್ಮದ್ ಸಮರ್ಥನೆಗೆ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲೇ ಮತಾಂಧರು ತುಂಬಿರುವಾಗ ಇನ್ನು ಹೊರಗೆ ಇರುವ ಪುಂಡರು ಬಾಲ ಬಿಚ್ಚದೆ ಇರುತ್ತಾರೆಯೇ?
ಸಚಿವ ಜಮೀರ್ ಅಹ್ಮದ್ ಅವರ ಪ್ರಕಾರ ನಮ್ಮ ದೇಶದಲ್ಲಿ ಅನ್ಯ ದೇಶದ ಧ್ವಜವೂ ಹಾರಿಸಬಹುದು, ಅನ್ಯ ದೇಶದ ರಾಷ್ಟ್ರಗೀತೆಯನ್ನೂ ಹಾಡಬಹುದು, ಅನ್ಯ ದೇಶಕ್ಕೆ ಜಯಕಾರವೂ ಹಾಕಬಹುದು.
ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಹೋದಲ್ಲೆಲ್ಲ ಪ್ರದರ್ಶನ ಮಾಡುವ ಸಂವಿಧಾನ ಪುಸ್ತಕದಲ್ಲಿ ಅನ್ಯ ದೇಶದ ಲಾಂಛನಗಳನ್ನ ಪ್ರದರ್ಶನ ಮಾಡುವುದು ಸರಿ ಎಂದು ಉಲ್ಲೇಖ ಮಾಡಲಾಗಿದೆಯೇ?
ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ, ದೇಶಭಕ್ತಿ ಇದ್ದರೆ ಇಂತಹ ದೇಶದ್ರೋಹಿಗಳನ್ನ ಸಂಪುಟದಿಂದ ಕಿತ್ತು ಬಿಸಾಕಿ.
ಪ್ಯಾಲೆಸ್ತೇನಿ ಧ್ವಜ ಹಾರಾಟದ ಬಗ್ಗೆ ಜಮೀರ್ ಪ್ರತಿಕ್ರಿಯೆ ಹೀಗಿತ್ತು:
ಪ್ಯಾಲೆಸ್ತೀನ್ಗೆ ಕೇಂದ್ರ ಸರ್ಕಾರವೇ ಬೆಂಬಲ ಸೂಚಿಸಿದೆ. ಹೀಗಿರುವಾಗ ಧ್ವಜ ಹಿಡಿದುಕೊಂಡು ಹೋದರೆ ತಪ್ಪೇನು? ಕೇಂದ್ರ ಸರ್ಕಾರ ಪ್ಯಾಲೆಸ್ತೀನ್ಗೆ ಬೆಂಬಲ ಘೋಷಣೆ ಮಾಡಿರುವ ಕಾರಣವೇ ಧ್ವಜ ಹಿಡಿದಿದ್ದಾರೆ, ಇಲ್ಲಾಂದರೆ ಹಿಡಿಯುತ್ತಿರಲಿಲ್ಲ. ಬೇರೆ ದೇಶದ ಬಗ್ಗೆ ಘೋಷಣೆ ಕೂಗಿದರೆ ಅದು ತಪ್ಪು. ಹಾಗೆ ಮಾಡಿದವರು ದೇಶದ್ರೋಹಿಗಳು. ಅಂಥವರನ್ನು ಗಲ್ಲಿಗೇರಿಸಬೇಕು. ಹಾಗೆಂದು ಧ್ವಜ ಹಿಡಿದರೆ ತಪ್ಪಿಲ್ಲ ಎಂದು ಜಮೀರ್ ಹೇಳಿದರು.