S.S. ಮಲ್ಲಿಕಾರ್ಜುನ್‌ ಆಸ್ತಿ 152 ಕೋಟಿ

ಶನಿವಾರ, 15 ಏಪ್ರಿಲ್ 2023 (16:40 IST)
ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ S.S. ಮಲ್ಲಿಕಾರ್ಜುನ್‌ ತಮ್ಮ ಪತ್ನಿಯೊಂದಿಗೆ ನಿನ್ನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರು ಬರೋಬ್ಬರಿ 152 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪುತ್ರರಾಗಿರುವ S.S. ಮಲ್ಲಿಕಾರ್ಜುನ್‌ ಮೊದಲ ದಿನವೇ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್‌ರೊಂದಿಗೆ ಮಹಾನಗರ ಪಾಲಿಕೆ ಚುನಾವಣೆ ಶಾಖೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇವರು ಒಟ್ಟು ಎರಡು ನಾಮಪತ್ರ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರ ಶಕ್ತಿ ಪ್ರದರ್ಶನದೊಂದಿಗೆ S.S. ಮಲ್ಲಿಕಾರ್ಜುನ್‌ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 55 ವರ್ಷದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಫಿಡವಿಟ್‌ನಲ್ಲಿ 152.27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 81.93 ಕೋಟಿ ರೂಪಾಯಿ ಚರಾಸ್ತಿ, 70.78 ಕೋಟಿ ರೂಪಾಯಿ ಸ್ಥಿರಾಸ್ತಿ ಸೇರಿದ್ದು, 23. 60 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. 16.54 ಕೆ.ಜಿ ಚಿನ್ನ, 6.28 ಕ್ವಿಂಟಾಲ್‌ ಬೆಳ್ಳಿ ಹಾಗೂ ವಜ್ರ ಸೇರಿ ಇತರ ಬೆಲೆಬಾಳುವ ವಸ್ತುಗಳು ಇವೆ ಎಂದು ಹೇಳಿದ್ದಾರೆ. ಪತ್ನಿ ಬಳಿ 1 ಕೋಟಿ ರೂಪಾಯಿ ಮೌಲ್ಯದ ಆಭರಣಗಳಿದ್ದು ಇದರಲ್ಲಿ 3.19 ಕೆಜಿ ಚಿನ್ನ ಇರುವುದಾಗಿ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ