ಬೆಂಗಳೂರು: ಮಾಜಿ ಸಂಸದ ಡಿಕೆ ಸುರೇಶ್ ಹೆಸರು ಬಳಸಿಕೊಂಡು ಮಹಿಳೆಯೊಬ್ಬರು ಚಿನ್ನ ಖರೀದಿಸಿದ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಧರ್ಮ ಹೆಸರೂ ಕೇಳಬಂದಿದ್ದು ಎಫ್ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ, ನಟ ಧರ್ಮ ಮತ್ತು ಹರೀಶ್ ಎಂಬವರ ವಿರುದ್ಧ ದೂರು ದಾಖಲಾಗಿದೆ. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನಿಂದ ಐಶ್ವರ್ಯಾ 11 ಬಾರಿ ಚಿನ್ನ ಖರೀದಿ ಮಾಡಿದ್ದಳು. ಒಟ್ಟು ಸುಮಾರು 14 ಕೆಜಿಯಷ್ಟು ಚಿನ್ನ ಖರೀದಿ ಮಾಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ವಾರಾಹಿ ಮಾಲಿಕರಾದ ವನಿತಾ ಐತಾಳ್ ದೂರು ನೀಡಿದ್ದರು.
ಕಳೆದ ಜನವರಿಯಿಂದ ಇಲ್ಲಿಯವರೆಗೆ ಐಶ್ವರ್ಯಾ ಚಿನ್ನ ಖರೀದಿ ಮಾಡಿದ್ದರೂ ಹಣ ಕೊಟ್ಟಿರಲಿಲ್ಲ. ಕೇಳಿದಾಗ ಡಿಕೆ ಸುರೇಶ್ ಹೆಸರು ಹೇಳಿದ್ದಾರೆ. ಅವರ ಕಡೆಯಿಂದಲೇ ಫೋನ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಟ ಧರ್ಮ ಕೈಯಲ್ಲಿ ಡಿಕೆ ಸುರೇಶ್ ರಂತೇ ಮಿಮಿಕ್ರಿ ಮಾಡಿ ಮಾತನಾಡಿಸಿ ಸಮಯಾವಕಾಶ ಕೇಳಿದ್ದರು. ಕೊನೆಗೆ ಧರ್ಮನನ್ನು ಕಳುಹಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಟ ಧರ್ಮ, ಐಶ್ವರ್ಯಾ ಸೇರಿದಂತೆ ಮೂವರ ವಿರುದ್ಧ ಕೇಸ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಬೆದರಿಕೆ, ಬೆದರಿಕೆ, ನಿಂದನೆ ಸೇರಿದಂತೆ ಹಲವು ಆರೋಪಗಳನ್ನು ಮಾಡಲಾಗಿದೆ.