ಬೆಂಗಳೂರು: ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಸಿನಿಮಾ ಸೆಲೆಬ್ರಿಟಿಗಳನ್ನು ಕರೆಸಿಕೊಳ್ಳುವುದು ಸಾಮಾನ್ಯ. ಈ ಬಾರಿ ಲೋಸಕಭೆ ಚುನಾವಣೆಯಲ್ಲಿ ಸ್ಯಾಂಡಲ್ ವುಡ್ ನ ಕೆಲವು ಹಳೆಯ ಮುಖಗಳ ಜೊತೆ ಹೊಸ ಮುಖಗಳು ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸುವ ಸಾಧ‍್ಯತೆಯಿದೆ. ಅವರ ಲಿಸ್ಟ್ ಇಲ್ಲಿದೆ ನೋಡಿ.
ಬಿಜೆಪಿ ಪರ ಪ್ರಚಾರ ಮಾಡಲಿರುವವರು: ನಟಿ ತಾರಾ ಅನುರಾಧ, ಶ್ರುತಿ ಕೃಷ್ಣ, ಮಾಳವಿಕಾ ಅವಿನಾಶ್ ಈಗಾಗಲೇ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷಕ್ಕೆ ಇವರು ಹಳೆಯ ಮುಖಗಳು. ಶ್ರುತಿ ಕೃಷ್ಣ ಅವರನ್ನು ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷ ಪ್ರಚಾರಕ್ಕೆ ಬಳಸಿಕೊಂಡಿತ್ತು. ಈ ಬಾರಿ ಯಾವೆಲ್ಲಾ ಸೆಲೆಬ್ರಿಟಿಗಳು ಪಕ್ಷದ ಪರ ಪ್ರಚಾರ ನಡೆಸಬೇಕು ಎಂದು ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಲಿಸ್ಟ್ ಮಾಡಿಕೊಂಡಿದ್ದಾರೆ. ಆ ಪೈಕಿ ಕಿಚ್ಚ ಸುದೀಪ್, ನಿಖಿಲ್ ಕುಮಾರಸ್ವಾಮಿ ಕೂಡಾ ಸೇರ್ಪಡೆಯಾಗಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ನಾಯಕ ಕೂಡಾ. ಹೀಗಾಗಿ ತಂದೆ ಎಚ್ ಡಿ ಕುಮಾರಸ್ವಾಮಿ ಪರವಾಗಿ ಮಂಡ್ಯದಲ್ಲಿ ಅವರೇ ಪ್ರಚಾರ ಮುಂಚೂಣಿಯಲ್ಲಿದ್ದಾರೆ.
ಕಾಂಗ್ರೆಸ್ ಪರ ಪ್ರಚಾರಕರು: ಕಾಂಗ್ರೆಸ್ ಈ ಬಾರಿ ಮೈಸೂರು ಕ್ಷೇತ್ರದಿಂದ ಡಾಲಿ ಧನಂಜಯ್ ಅವರಿಗೆ ಟಿಕೆಟ್ ನೀಡಬಹುದು ಎಂಬ ಊಹಾಪೋಹಗಳಿತ್ತು. ಆದರೆ ಕೊನೆಗೆ ಡಾಲಿ ಸ್ಪರ್ಧಿಸದೇ ಇರಲು ತೀರ್ಮಾನಿಸಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಅವರು ಕಾಂಗ್ರೆಸ್ ಪರ ಪ್ರಚಾರ ನಡೆಸಬಹುದು. ಅವರಲ್ಲದೇ, ದುನಿಯಾ ವಿಜಯ್ ಕೂಡಾ ಈಗಾಗಲೇ ಕಾಂಗ್ರೆಸ್ ಪರವಾಗಿದ್ದಾರೆ. ಹೀಗಾಗಿ ಅವರನ್ನೂ ಪ್ರಚಾರಕ್ಕೆ ಬಳಸಬಹುದು.
ಕಾಂಗ್ರೆಸ್ ಪರ ಶಿವಮೊಗ್ಗದಿಂದ ಈ ಬಾರಿ ನಿರ್ಮಾಪಕಿ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಅವರ ಪರವಾಗಿ ಈಗಾಗಲೇ ಶಿವರಾಜ್ ಕುಮಾರ್ ಸಕ್ರಿಯರಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ನಿಶ್ವಿಕಾ ನಾಯ್ಡು, ಉಮಾಶ್ರೀ, ಸಾಧಕೋಕಿಲ ಮುಂತಾದವರು ಪ್ರಚಾರಕ್ಕೆ ಸಾಥ್ ಕೊಡಲಿದ್ದಾರೆ. ಉಮಾಶ್ರೀ ಕಾಂಗ್ರೆಸ್ ಎಂಎಲ್ ಸಿ ಕೂಡಾ ಆಗಿದ್ದಾರೆ. ಸಾಧುಕೋಕಿಲ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ನಟಿ ರಮ್ಯಾ ಈಗಾಗಲೇ ರಾಜಕೀಯ ಕಾರಣಕ್ಕೆ ಉತ್ತರಕಾಂಡ ಸಿನಿಮಾವನ್ನೇ ಕೈಬಿಟ್ಟಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್ ಪರ ಸ್ಟಾರ್ ಪ್ರಚಾರಕಿಯಾಗಿ ಕೆಲಸ ಮಾಡುವುದು ಪಕ್ಕಾ ಆಗಿದೆ.
ಎಎಪಿಯಲ್ಲೂ ಇದ್ದಾರೆ ಹಿರಿಯ ನಟರು
ಆಮ್ ಆದ್ಮಿ ಪಕ್ಷವೂ ರಾಜ್ಯದಲ್ಲಿ ತಕ್ಕಮಟ್ಟಿಗೆ ಸಕ್ರಿಯವಾಗಿದೆ. ಸ್ಯಾಂಡಲ್ ವುಡ್ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಟೆನಿಸ್ ಕೃಷ್ಣ ಎಎಪಿಗೆ ಈಗಾಗಲೇ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಹೀಗಾಗಿ ತಮ್ಮ ಪಕ್ಷದ ಪರ ಈ ಹಿರಿಯ ನಟರು ಪ್ರಚಾರ ನಡೆಸಲಿದ್ದಾರೆ.
ಕೆಲವರಿಗೆ ಪಕ್ಷವಲ್ಲ, ಅಭ್ಯರ್ಥಿಗಳೇ ಮುಖ್ಯ
ಇನ್ನು ಕೆಲವು ನಟರು ಯಾವುದೇ ಅಭ್ಯರ್ಥಿ ಪರವಲ್ಲ, ತಮ್ಮ ಪರಿಚಿತ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಾರೆ. ಆ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ‍್ರುವ ಸರ್ಜಾ ಮುಂತಾದವರಿದ್ದಾರೆ. ದರ್ಶನ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದರು. ಆದರೆ ಈ ಬಾರಿ ಸುಮಲತಾ ಎಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಅಂತಿಮವಾಗಿಲ್ಲ. ಬಹುಶಃ ಸುಮಲತಾ ಯಾವ ಪಕ್ಷದಿಂದ ಚುನಾವಣೆಗೆ ನಿಂತರೂ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್ ಪ್ರಚಾರ ನಡೆಸಲಿದ್ದಾರೆ. ಧ್ರುವ ಸರ್ಜಾ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಪ್ರಚಾರ ನಡೆಸಿದ್ದರು. ಕಳೆದ ಬಾರಿ ಸುಮಲತಾ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಿದ್ದರು. ಆದರೆ ಈ ಬಾರಿ ಅವರು ರಾಜಕೀಯದಿಂದ ದೂರವುಳಿದಿದ್ದಾರೆ. ಇನ್ನು, ನಟಿ ಹರ್ಷಿಕಾ ಪೂಣಚ್ಚ ಮಂಡ್ಯ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸುವ ಸಾಧ‍್ಯತೆಯಿದೆ.
ಎಲ್ಲಾ ಪಕ್ಷಗಳೂ ತಮ್ಮ ಪಕ್ಷದ ಪರ ಪ್ರಚಾರ ನಡೆಸಲು ಸೆಲೆಬ್ರಿಟಿಗಳ ಲಿಸ್ಟ್ ಮಾಡಿಕೊಂಡಿದೆ. ಯಾವ ಸೆಲೆಬ್ರಿಟಿಗಳು ಯಾವ ಪಕ್ಷದ ಪರ ಪ್ರಚಾರ ನಡೆಸುತ್ತಾರೆ ಎಂದು ಕಾದುನೋಡಬೇಕಿದೆ.