ಶಿವಮೊಗ್ಗ: ತಮಗೆ ಬಿಜೆಪಿ ಟಿಕೆಟ್ ಸಿಗದ ಆಕ್ರೋಶವನ್ನು ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಮತ್ತೊಮ್ಮೆ ಹೊರಹಾಕಿದ್ದಾರೆ. ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ ನಡೆಸಲು ತೀರ್ಮಾನಿಸಿದ್ದಾರೆ. ಅವರು ಸ್ಪರ್ಧಿಸದಂತೆ ತಡೆಯಲು ಹೈಕಮಾಂಡ್ ಮನವೊಲಿಕೆಗೆ ಪ್ರಯತ್ನಿಸುತ್ತಿದೆ. ಆದರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಈಶ್ವರಪ್ಪ ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಟೊಂಕ ಕಟ್ಟಿ ನಿಂತಿದ್ದಾರೆ.
ಶಿವಮೊಗ್ಗದ ತಮ್ಮ ನಿವಾಸದಲ್ಲೇ ಈಶ್ವರಪ್ಪ ಚುನಾವಣಾ ಕಚೇರಿ ತೆರೆದಿದ್ದಾರೆ. ಬಳಿಕ ಮಾತನಾಡಿದ ಅವರು ಏನೇ ಆದರೂ ಚುನಾವಣೆಗೆ ಸ್ಪರ್ಧೆ ಮಾಡಿಯೇ ತೀರುತ್ತೇನೆ. ಗೆದ್ದು ಮೋದಿ ಬಳಿ ಹೋಗುತ್ತೇನೆ ಎಂದು ಶಪಥ ಮಾಡಿದ್ದಾರೆ. ಜೊತೆಗೆ ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ನನ್ನ ಮಗನನ್ನು ಎಂಪಿ ಮಾಡುತ್ತೇನೆ ಎಂದು ಸುಳ್ಳು ಹೇಳಿದರು. ಯಡಿಯೂರಪ್ಪ ಸುಳ್ಳಿನ ಸರದಾರ. ಪಕ್ಷದಿಂದ ತೆಗೆದು ಹಾಕಿದ್ರೆ ಮತ್ತೆ ಬಿಜೆಪಿ ಸೇರ್ತೇನೆ. ಈ ಚುನಾವಣೆ ಬಳಿಕ ರಾಘವೇಂದ್ರ ಸೋತ ಮೇಲೆ ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ ಕಳೆದುಕೊಳ್ಳುತ್ತಾರೆ ಎಂದು ಈಶ‍್ವರಪ್ಪ ಹೇಳಿದ್ದಾರೆ.