15 ತಿಂಗಳಯಿಂದೆ ಮೃತಪಟ್ಟ ಕೋವಿಡ್ ರೋಗಿಗಳ ಶವ ಪತ್ತೆ

ಸೋಮವಾರ, 29 ನವೆಂಬರ್ 2021 (14:56 IST)
ಕೋವಿಡ್ ಮೊದಲ ಅಲೆಯ ಸಂದರ್ಭ ಸೋಂಕಿಗೊಳಗಾಗಿ ಮೃತಪಟ್ಟ ಇಬ್ಬರ ಮೃತದೇಹಗಳು 15 ತಿಂಗಳುಗಳ ಕಾಲ ಅಂತ್ಯ ಸಂಸ್ಕಾರವನ್ನು ಕಾಣದೆ ಶವಾಗಾರದ ಶೈತ್ಯಾಗಾರದಲ್ಲೇ ಉಳಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ.ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಘಟನೆ ನಡೆದಿರುವುದಾಗಿ 'ಟಿವಿ9 ಕನ್ನಡ' ವರದಿ ಮಾಡಿದೆ. ಚಾಮರಾಜಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಎಂಬವರು ಕೋವಿಡ್ ಸೋಂಕಿನಿಂದ 2020ರ ಜುಲೈ ತಿಂಗಳಲ್ಲಿ ಮೃತಪಟ್ಟಿದ್ದರು. ಈ ವೇಳೆ ಕೋವಿಡ್ ನಿಂದ ಮೃತಪಟ್ಟವರ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡದೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಿ ಸರಕಾರದ ವತಿಯಿಂದಲೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಅದರಂತೆ ದುರ್ಗಾ ಮತ್ತು ಮುನಿರಾಜು ಅವರ ಮೃತದೇಹಗಳನ್ನು ಅಂತ್ಯಸಂಸ್ಕಾರದ ಉದ್ದೇಶದಿಂದ ರಾಜಾಜಿ ನಗರದ ಇಎಸ್‌ಐ ಆಸ್ಪತ್ರೆಯ ಶವಾಗಾರದ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಆದರೆ ಈ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲೇ ಇಲ್ಲ. ಅಲ್ಲದೆ ಈ ಎರಡು ಮೃತದೇಹಗಳು ಶವಾಗಾರದಲ್ಲೇ ಉಳಿದಿದ್ದು, 15 ತಿಂಗಳ ಬಳಿಕ ಇದೀಗ ಬೆಳಕಿಗೆ ಬಂದಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಎರಡು ದಿನಗಳ ಹಿಂದೆ ಹೊರತೆಗೆಯಲಾಗಿದ್ದು, ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
 
ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ಹೊಸ ಶವಾಗಾರ‌ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆ ಕಟ್ಟಡದಲ್ಲಿ ಎರಡು ಮೃತದೇಹಗಳನ್ನು ಇಟ್ಟಿರುವುದನ್ನೇ ಸಿಬ್ಬಂದಿ ಮರೆತಿದ್ದೇ ಎಡವಟ್ಟಿಗೆ ಕಾರಣ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ