ಆಮ್‌ ಆದ್ಮಿ ಪಾರ್ಟಿಗೆ ಹಿರಿಯ ಕಾಂಗ್ರೆಸ್ ಮುಖಂಡ ಬ್ರಿಜೇಶ್‌ ಕಾಳಪ್ಪ ಸೇರ್ಪಡೆ

ಸೋಮವಾರ, 5 ಸೆಪ್ಟಂಬರ್ 2022 (19:32 IST)
ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪರವರು ಆಮ್‌ ಆದ್ಮಿ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು. ಬೆಂಗಳೂರಿನ ಹೊಟೇಲ್‌ ಪರಾಗ್‌ನಲ್ಲಿ ನಡೆದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಎಎಪಿಯ ಕರ್ನಾಟಕ ಉಸ್ತುವಾರಿ ದಿಲೀಪ್‌ ಪಾಂಡೆರವರು ಬ್ರಿಜೇಶ್‌ ಕಾಳಪ್ಪರವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವ್ರು ಬ್ರಿಜೇಶ್ ಕಾಳಪ್ಪ ರಾಷ್ಟ್ರೀಯ ವಕ್ತಾರರಾಗಿ, ಸುಪ್ರೀಂಕೋರ್ಟ್‌ ವಕೀಲರಾಗಿ, ಕಾರ್ಯನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ ಎಂದು ಹೇಳಿದರು. ಪಕ್ಷ ಸೇರ್ಪಡೆಗೊಂಡ ನಂತರ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ಹೊಸಹೊಸ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಿದೆ. ಗುಣಮಟ್ಟ ಆಡಳಿತ ಹೇಗಿರುತ್ತದೆ ಎಂಬುದನ್ನು ದೇಶಕ್ಕೆ ತೋರಿಸಿಕೊಡುತ್ತಿದೆ. ಮುಂಬರುವ ವಿವಿಧ ಚುನಾವಣೆಗಳಲ್ಲಿ ಎಎಪಿ ಜಯಗಳಿಸಿ ಅಧಿಕಾರ ಹಿಡಿದರೆ ಮಾತ್ರ ದೇಶದ ಭವಿಷ್ಯ ಬಲಗೊಳ್ಳಲಿದೆ” ಎಂದು ಹೇಳಿದರು.  ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಮಾಜಿ ಹಿರಿಯ  ಕೆಎಎಸ್ ಅಧಿಕಾರಿ ಹಾಗೂ ಪಕ್ಷದ ಮಾಧ್ಯಮ ವಕ್ತಾರ ಕೆ. ಮಥಾಯಿ, ಪಕ್ಷದ ಮುಖಂಡರಾದ ಮೋಹನ್‌ ದಾಸರಿ, ಸಂಚಿತ್ ಸಹವಾನಿ, ಜಗದೀಶ್‌ ವಿ ಸದಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ