ಮಠದಲ್ಲೇ ರಾಸಲೀಲೆ ಪ್ರಕರಣ: ದಯಾನಂದ ಸ್ವಾಮಿ ಮೇಲೆ ಕೇಸ್

ಗುರುವಾರ, 26 ಅಕ್ಟೋಬರ್ 2017 (16:20 IST)
ಬೆಂಗಳೂರು: ಹುಣಸಮಾರನಹಳ್ಳಿ ಮಠದಲ್ಲೇ ರಾಸಲೀಲೆ ನಡೆಸಿದ ಆರೋಪದ ಮೇಲೆ ಉತ್ತರಾಧಿಕಾರಿ ದಯಾನಂದ ಸ್ವಾಮಿ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇವಣಾಪುರ ಮಠದ ದೇವ ಸಿಂಹಾಸನ ಟ್ರಸ್ಟ್‌ನ ಅಧ್ಯಕ್ಷರು ಈ ಕುರಿತು ದೂರು ದಾಖಲಿಸಿದ್ದಾರೆ. ಮಠದ ಪೀಠಾಧಿಪತಿ ಶಿವಾನಂದಾಚಾರ್ಯ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಅವರ ಮಗನೆಂದು ಹೇಳಿಕೊಳ್ಳುವ ದಯಾನಂದ, ಮಠದ ಉಸ್ತುವಾರಿ ವಹಿಸಿಕೊಂಡಿದ್ದು ಅಕ್ರಮ ಅವ್ಯವಹಾರ ಮತ್ತು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದಯಾನಂದ ಸ್ವಾಮೀಜಿ ಹನಿ ಟ್ರಾಪ್ ಬಲೆಯಲ್ಲೂ ಬಿದ್ದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಮಠದ ಟ್ರಸ್ಟ್‌ನ ಗಮನಕ್ಕೆ ತಾರದೆ ಮಠದ ಕೋಟಿಗಟ್ಟಲೇ ಬೆಲೆ ಬಾಳುವ ಆಸ್ತಿಯನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಬೆಳಗ್ಗೆಯಿಂದ ಮಾಧ್ಯಮಗಳಲ್ಲಿ ತೋರಿಸುತ್ತಿರುವ ದಯಾನಂದ ರಾಸಲೀಲೆ ವಿಡಿಯೋ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ವಿಡಿಯೋದಲ್ಲಿರುವ ಯುವತಿ ದೂರು ನೀಡಿದ್ರೆ ಕ್ರಮ ಕೈಗೊಳ್ಳುತ್ತೇವೆ. ಆದ್ರೆ ಯುವತಿ ಮುಂದೆ ಬಂದಿಲ್ಲವೆಂದು ಡಿಸಿಪಿ ಗಿರೀಶ್‌ ಹೇಳಿದ್ದಾರೆ.

ಇನ್ನು ಮಠದ ಆಸ್ತಿಯ ಅಕ್ರಮ ಆರೋಪದ ಬಗ್ಗೆ ಕಂದಾಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ಇದೇ ವೇಳೆ ಡಿಸಿಪಿ  ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ