ಸೀಮಂತ ನಡೆಯಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ; ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ”

ಭಾನುವಾರ, 30 ಜೂನ್ 2019 (15:44 IST)
“ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ” ಮಕ್ಕಳ ಈ ಆಕ್ರಂದನ ಮನಕಲಕುತ್ತಿತ್ತು. ಈ ದೃಶ್ಯ ಎಂಥವರ ಕಣ್ಣಾಲಿಗಳನ್ನು ಒದ್ದೆಯಾಗುವಂತೆ ಮಾಡಿತು.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮ ಇಂತಹ ಘಟನೆಗೆ ಸಾಕ್ಷಿಯಾಯಿತು. ಹುತಾತ್ಮ ಯೋಧ ಮಹಾದೇವ ಪೊಲೀಸ್ ಪಾಟೀಲ್ ಅವರ ಮಕ್ಕಳ ರೋಧನ ಹೇಳತೀರದಾಗಿತ್ತು. ಸಂದೀಪ್ ಪಾಟೀಲ್,  ಜ್ಯೋತಿ ಹಾಗೂ ಕುಲದೀಪ್ ಪಾಟೀಲ್ ಅವರ ಪಾಲಿಗೆ ನಮ್ಮ ಅಪ್ಪ ಇನ್ನೂ ಬದುಕಿದ್ದಾರೆ ಎಂಬಂತಿದ್ದರು. 

ಅಪ್ಪ, ಏಳು ಅಪ್ಪ, ಮಾತಾಡು ಅಪ್ಪ ಅಂತ ನಿರಂತರವಾಗಿ ತಮ್ಮ ನೋವನ್ನು ಹೊರಚೆಲ್ಲುತ್ತಿದ್ದರು. ಹುತಾತ್ಮ ಯೋಧನ ಧರ್ಮಪತ್ನಿ ಮಲ್ಲಮ್ಮ ಅವರ ಗೋಳು ಕೂಡ ಇದೇ ರೀತಿಯದ್ದು.

ಯಾಕಂದ್ರೆ, ಮಗಳು ಜ್ಯೋತಿಯ ಸೀಮಂತ ಕಾರ್ಯಕ್ರಮ ಜುಲೈ 1ನೇ ತಾರೀಖು ಸೋಮವಾರ ಸ್ವಗ್ರಾಮದ ಮನೆಯಲ್ಲಿ ನಡೆಸಲು ಸಿದ್ಧತೆ ನಡೆದಿತ್ತು. ಮಗಳ ಸಂಭ್ರಮದಲ್ಲಿ ಜೊತೆಗೂಡಲು, ರಜೆ ಪಡೆಯುವುದಕ್ಕಾಗಿ ಸಿಆರ್‍ಪಿಎಫ್ ಕಚೇರಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ನಕ್ಸಲ್ ದಾಳಿಯಲ್ಲಿ ಮಹಾದೇವ ಪಾಟೀಲ ಪ್ರಾಣತೆತ್ತಿದ್ದಾರೆ. ಆ ವಿಧಿ ಸಂಭ್ರಮ-ಸಡಗರ ಕಿತ್ತುಕೊಂಡು ಸೂತಕದ ಛಾಯೆ ಮೂಡಿಸಿದೆ ಎಂದು ಹುತಾತ್ಮ ಯೋಧನ ಅಣ್ಣ ಬಿಕ್ಕುತ್ತಾ ಕಣ್ಣೀರಾದ್ರು.

199ನೇ ಬಟಾಲಿಯನ್ ಸಿಆರ್‍ಫಿಎಫ್ ಯೋಧ ಮಹಾದೇವ ಅವರು ಛತ್ತೀಸ್‍ಗಢದಲ್ಲಿ ಸೇವೆ ಸಲ್ಲಿಸುತ್ತಿದ್ರೂ, ಮಕ್ಕಳು – ಮಡದಿಯರೆಲ್ಲಾ ಹೈದ್ರಾಬಾದ್‍ನಲ್ಲಿ ಪೊಲೀಸ್ ವಸತಿ ಗೃಹದಲ್ಲಿ ನೆಲೆಸಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದೋರು ಈಗ ದುಃಖದ ಕಡಲಲ್ಲಿ ಮುಳಿಗಿದ್ದಾರೆ. ಆದರೆ, ದೇಶಕ್ಕಾಗಿ ಪ್ರಾಣಕೊಟ್ಟಿದ್ದಾರೆ ಹೆಮ್ಮೆ, ಮುಂದಿನ ದಿನಗಳಲ್ಲಿ ಕುಟುಂಬದ ದುಃಖ ಮರೆಸೋದಂತೂ ಸತ್ಯ.

ಮಹಾದೇವ ಹುತಾತ್ಮರಾಗಿರಬಹುದು, ಆದರೆ, ಅವರ ದೇಶ ಸೇವೆ ನಾಡಿನ ಯುವಕರೂ ಸೇರಿದಂತೆ ಎಲ್ಲರಿಗೂ ಸ್ಫೂರ್ತಿಯಾಗಿದೆ. “ಮಹಾದೇವ ಅಮರ್ ರಹೇ, ಅಮರ್ ರಹೇ” ಎಂದು ಶಾಲಾ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಕೂಗುತ್ತಿದ್ದ ಘೋಷಣೆ ಇಡೀ ಪರಿಸರದಲ್ಲಿ ಮಾರ್ಧನಿಸುತ್ತಿದ್ದುದು ಇದಕ್ಕೆ ಸಾಕ್ಷಿ. ಪಂಚಭೂತಗಳಲ್ಲಿ ಯೋಧ ಲೀನವಾದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ