ತಿರುಪತಿಯಲ್ಲಿ ಹಿಂದೂಯೇತರ ಚಿಹ್ನೆ: ಜಗನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ ಶೋಭಾ ಕರಂದ್ಲಾಜೆ

Krishnaveni K

ಶುಕ್ರವಾರ, 20 ಸೆಪ್ಟಂಬರ್ 2024 (14:14 IST)
ತಿರುಪತಿ: ತಿಮ್ಮಪ್ಪನ ಲಡ್ಡಿಗೆ ಪ್ರಾಣಿಗಳ ಕೊಬ್ಬಿನ ಬಳಕೆ ಮಾಡಿದ್ದರು ಎಂಬ ಆರೋಪಗಳ ಬೆನ್ನಲ್ಲೇ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೊಂದು ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶೋಭಾ, ಹಿಂದಿನ ಸರ್ಕಾರದ ಸಿಎಂ ಆಗಿದ್ದ ಜಗನ್ ತಿರುಪತಿಯ ಕಾಲೇಜುಗಳಲ್ಲಿ ತಿಮ್ಮಪ್ಪನ ಫೋಟೋ ಕಿತ್ತು ಹಾಕಿದ ಹಿಂದೂಯೇತರ ಚಿಹ್ನೆ ಬಳಸಲು ತಾಕೀತು ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡಿದ ಆರೋಪಕ್ಕೆ ಸಿಲುಕಿರುವ ಮಾಜಿ ಸಿಎಂ ಜಗನ್ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ ಎದುರಾಗಿದೆ.

ಜಗನ್ ಸರ್ಕಾರವಿದ್ದಾಗ ತಿರುಪತಿಯ ಕಾಲೇಜುಗಳಲ್ಲಿ ವೆಂಕಟೇಶನ ಫೋಟೋಗಳನ್ನು ಕಿತ್ತು ಹಾಕಲು ಬಲವಂತ ಮಾಡಲಾಗಿತ್ತು. ತಿರುಪತಿ ಬೆಟ್ಟದಲ್ಲಿ ಹಿಂದೂಯೇತರ ದೇವರ ಚಿಹ್ನೆಯನ್ನು ಬಳಸಲು ಜಗನ್ ಸರ್ಕಾರ ಒತ್ತಡ ಹಾಕಿತ್ತು. ಟಿಟಿಡಿ ಬೋರ್ಡ್ ನಲ್ಲಿ ಹಿಂದೂಯೇತರರನ್ನು ನೇಮಿಸಲಾಗಿತ್ತು. ಲಡ್ಡು ಪ್ರಸಾದಕ್ಕೂ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿತ್ತು. ಈ ಹಿಂದೂ ವಿರೋಧಿ ರಾಜಕೀಯಕ್ಕೆ ಕ್ಷಮಿಸಿ ಬಿಡು ವೆಂಕಟೇಶ ದೇವರೇ ಎಂದು ಶೋಭಾ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು, ಈ ಮಹಾಪರಾಧಕ್ಕೆ ಕೇವಲ ಒಂದು ‘ಸಾರಿ’ ಕೇಳಿದ್ರೆ ಆಗೋಯ್ತಾ ಮೇಡಂ? ನಿಮ್ಮ ಮೋದಿ ಸರ್ಕಾರ ಇಂತಹ ಅಪರಾಧದ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಕೇಳಿದ್ದಾರೆ. ಇನ್ನು, ಕೆಲವರು ಇಷ್ಟೆಲ್ಲಾ ಮೊದಲೇ ಗೊತ್ತಿದ್ದರೂ ಯಾಕೆ ನೀವು ಈ ಮೊದಲು ಸುಮ್ಮನಿದ್ದಿರಿ ಎಂದು ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ