ಮೈಸೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ವಿರುದ್ಧ ನಟ ಡಾಲಿ ಧನಂಜಯ್ ಸ್ಪರ್ಧಿಸಲಿದ್ದಾರೆ ಎಂಬ ಊಹಾ ಪೋಹಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಡಾಲಿ ಧನಂಜಯ್ ಕೂಡಾ ಯುವ ಜನಾಂಗವನ್ನು ಆಕರ್ಷಿಸುವ ಗುಣವಿರುವ ನಟ. ಇದುವರೆಗೆ ರಾಜಕೀಯದಲ್ಲಿ ಪ್ರತ್ಯಕ್ಷವಾಗಿ ಇರದೇ ಇದ್ದರೂ ಡಾಲಿ ಧನಂಜಯ್ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಅಭಿಮಾನದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿತ್ತು.
ಪ್ರತಾಪ್ ಸಿಂಹ ಯೂಥ್ ಐಕಾನ್ ಇಮೇಜ್ ಇರುವ ನಾಯಕ. ಅವರನ್ನು ಹಣಿಯಲು ಅಂತಹದ್ದೇ ಪ್ರಬಲ ನಾಯಕನ ಅಗತ್ಯವಿದೆ. ಹೀಗಾಗಿ ಕಾಂಗ್ರೆಸ್ ಡಾಲಿ ಧನಂಜಯ್ ಅವರನ್ನು ಕಣಕ್ಕಿಳಿಸಲಿದೆ ಎನ್ನಲಾಗಿತ್ತು. ಇತ್ತೀಚೆಗೆ ಬಜೆಟ್ ನಲ್ಲೂ ಸಿಎಂ ಸಿದ್ದರಾಮಯ್ಯ ಡೇರ್ ಡೆವಿಲ್ ಮುಸ್ತಫಾ ಸಿನಿಮಾದ ಡೈಲಾಗ್ ಒಂದನ್ನು ಹೇಳಿದ್ದರು. ಜೊತೆಗೆ ಇತ್ತೀಚೆಗೆ ಡಾಲಿ ಧನಂಜಯ್ ಅವರನ್ನು ಭೇಟಿ ಕೂಡಾ ಆಗಿದ್ದರು. ಹೀಗಾಗಿ ಈ ಸುದ್ದಿ ಮುನ್ನೆಲೆಗೆ ಬಂದಿತ್ತು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನನಗೆ ಈ ಬಗ್ಗೆ ಇದುವರೆಗೆ ಅಂತಹ ಯಾವುದೇ ಸುದ್ದಿ ಬಂದಿಲ್ಲ. ಯಾರೂ ನನ್ನ ಜೊತೆ ಈ ಬಗ್ಗೆ ಚರ್ಚಿಸಿಲ್ಲ ಎಂದಿದ್ದಾರೆ. ಆ ಮೂಲಕ ಸದ್ಯಕ್ಕೆ ಈ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.