ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವ ರಾಹುಲ್ ಗಾಂಧಿ ಈಗ ಎಸ್ ಸಿ/ಎಸ್ ಟಿ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂಬ ವಿಚಾರವನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ರಾಹುಲ್ ಎಲ್ಲೇ ಹೋದರೂ ಕೇಂದ್ರ ಸರ್ಕಾರ ಹಿಂದಳಿದ ವರ್ಗದವರನ್ನು ಕಡೆಗಣಿಸುತ್ತಿದೆ ಎಂಬ ವಿಚಾರವನ್ನೇ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಭಾರತ್ ನ್ಯಾಯ್ ಜೋಡೋ ಯಾತ್ರೆಯಲ್ಲಿ ಎಲ್ಲೇ ಸಮಾವೇಶದಲ್ಲಿ ಮಾತನಾಡುವುದಿದ್ದರೂ ರಾಹುಲ್ ಭಾಷಣದಲ್ಲಿ ಈ ವಿಚಾರ ಬಂದೇ ಬರುತ್ತಿದೆ.
ಆ ಮೂಲಕ ಈ ವರ್ಗದವರನ್ನೇ ಅವರು ಟಾರ್ಗೆಟ್ ಮಾಡಿಕೊಂಡಿರುವುದು ಪಕ್ಕಾ ಆಗಿದೆ. ಉತ್ತರ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ, ದಲಿತ, ಹಿಂದುಳಿದ ಸಮುದಾಯದವರು ಅದರಲ್ಲಿ ಪಾಲ್ಗೊಂಡಿಲ್ಲ ಎಂದಿದ್ದರು. ಇದಕ್ಕೆ ಮೊದಲು ಇನ್ನೊಂದು ಸಮಾವೇಶದಲ್ಲಿ ದೇಶದ ಯಾವುದೇ ಪ್ರಮುಖ ಹುದ್ದೆಗಳಲ್ಲಿ ದಲಿತರು ಇಲ್ಲ ಎಂದಿದ್ದರು.
ಆ ಮೂಲಕ ಅಲ್ಪ ಸಂಖ್ಯಾತರ ಜೊತೆಗೆ ಹಿಂದುಳಿದ ವರ್ಗದವರ ವೋಟ್ ಮೇಲೂ ರಾಹುಲ್ ಕಣ್ಣಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಚುನಾವಣೆ ಬಂತೆಂದರೆ ಎಲ್ಲಾ ಪಕ್ಷಗಳೂ ಹಿಂದುಳಿದ ವರ್ಗದವರ ಓಲೈಕೆಗೆ ಮುಂದಾಗುವುದು ಸಹಜ. ಇದಕ್ಕೆ ಬಿಜೆಪಿಯೂ ಹೊರತಲ್ಲ. ಆದರೆ ರಾಹುಲ್ ತಮ್ಮ ಸಮಾವೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.