ಮೇಲ್ಜಾತಿಗಳನ್ನು ತುಳಿಯಲು ಜಾತಿಗಣತಿ ಎಂದ ಸೋಮಣ್ಣಗೆ ಸಮಾಜ ವಿರೋಧಿ ಎಂದ ಸಿದ್ದರಾಮಯ್ಯ

Krishnaveni K

ಸೋಮವಾರ, 6 ಅಕ್ಟೋಬರ್ 2025 (15:08 IST)
ಬೆಂಗಳೂರು: ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿಗಣತಿ ಮಾಡಲಾಗುತ್ತಿದೆ ಎಂಬ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು ಅವರು ಸಮಾಜ ವಿರೋಧಿ ಎಂದಿದ್ದಾರೆ.

ಮೇಲ್ಜಾತಿ ಅಥವಾ ಯಾವುದೋ ಜಾತಿಯವರನ್ನು ತುಳಿಯುವ ಸಲುವಾಗಿ ಈ ಅಸಹ್ಯ ಗಣತಿ ಮಾಡುತ್ತಿದ್ದಾರೆ. ಸಮೀಕ್ಷೆ ಬಗ್ಗೆ ಅಧಿಕಾರಿಗಳಿಗೇ ಸರಿಯಾದ ಮಾಹಿತಿಯಿಲ್ಲ.  ಈ ಸಮೀಕ್ಷೆ ವರ್ಷವಾದರೂ ಮುಗಿಯಲ್ಲ ಎಂದು ಸೋಮಣ್ಣ ಟೀಕಿಸಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ‘ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ಸೋಮಣ್ಣ ಅವರ ಆರೋಪ ಬಾಲಿಶವಾದುದ್ದು. ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸದಿದ್ದರೆ, ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ. ಈ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜ ನಿರ್ಮಾಣವನ್ನು ವಿರೋಧಿಸುವವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ಈಗಾಗಲೇ 1.10 ಕೋಟಿ ಕುಟುಂಬಗಳ ಸಮೀಕ್ಷಾ ಕಾರ್ಯ ಮುಗಿದಿದ್ದು, ನಿನ್ನೆವರೆಗೆ ಶೇ.63 ರಷ್ಟು ಸರ್ವೇ ಕಾರ್ಯ ಪ್ರಗತಿಯಾಗಿದೆ. ನಾಳೆ ಸಂಜೆವರೆಗೆ ಸಮೀಕ್ಷೆಯ ಪ್ರಗತಿಯನ್ನು ಪರಿಶೀಲಿಸಿ, ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ